ADVERTISEMENT

ಅಧಿಕಾರಿಗಳಿಂದ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:40 IST
Last Updated 18 ಫೆಬ್ರುವರಿ 2012, 6:40 IST

ಗದಗ: ತಾಲ್ಲೂಕಿನ ಬೆಳದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಮೂರನೇ ತಂಡವು ಪರಿಶೀಲನೆ ನಡೆಸಿದ್ದು, ಸದ್ಯದಲ್ಲೇ ವರದಿ ನೀಡಲಿದೆ ಎಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರು ತಿಳಿಸಿದರು.

ಶುಕ್ರವಾರ ಬೆಳದಡಿಯ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನಿರ್ವಹಿಸಲಾದ ಶಾಲೆ ಕಂಪೌಂಡ್, ಗಟಾರ, ಕೆರೆಗೆ ತಡೆಗೋಡೆ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ವೀಕ್ಷಿಸಿತು.

ಈ ಸಂದರ್ಭ ಅಧಿಕಾರಿಗಳ ತಂಡದೊಟ್ಟಿಗೆ ಮಾತಿಗೆ ಇಳಿದ ಗ್ರಾಮಸ್ಥರಾದ ಮೋತಿಲಾಲ ಮಾಳಗಿಮನಿ ಹಾಗೂ ಇತರರು `ಯೋಜನೆಯ ಅಡಿಯಲ್ಲಿ ಭಾರಿ ಮೊತ್ತದ ಅವ್ಯವಹಾರ ನಡೆದಿದೆ. ಈ ಹಿಂದೆಯೇ ಈ ಕುರಿತು ದೂರು ನೀಡಲಾಗಿದ್ದು, ಆದಷ್ಟು ಶೀಘ್ರ ವರದಿ ನೀಡಬೇಕು~ ಎಂದು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಬೆಳದಡಿ ಗ್ರಾ.ಪಂ. ಅಧ್ಯಕ್ಷೆ ಗೀತಾಬಾಯಿ ದೊಡ್ಡಮನಿ `ಬೆಳದಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಎಲ್ಲೂ ಅವ್ಯವಹಾರ ನಡೆದಿಲ್ಲ~ ಎಂದು ಸಮರ್ಥಿಸಿಕೊಂಡರು.ಗ್ರಾ.ಪಂ. ಸದಸ್ಯೆ ಪದ್ಮಾ ಲಮಾಣಿ ಹಾಗೂ ಇತರರು ಈ ಸಂದರ್ಭ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.