ADVERTISEMENT

ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 8:45 IST
Last Updated 7 ಜೂನ್ 2011, 8:45 IST

ಮುಂಡರಗಿ:  ಲಾಟರಿ ಎತ್ತುವ ಮೂಲಕ ಸುವರ್ಣ ಭೂಮಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಬಾರದೆಂದು ಆಗ್ರಹಿಸಿ ರೈತರು  ಅಧಿಕಾರಿಗಳೊಂದಿದೆ ವಾಗ್ದಾದ ನಡೆಸಿದ ಘಟನೆ ಇಂದಿಲ್ಲಿ ನಡೆಯಿತು.ಇಲ್ಲಿನ ಎಪಿಎಂಸಿ ಸಭಾ ಭವನದಲ್ಲಿ ಕೃಷಿ ಇಲಾಖೆಯ ವತಿಯಿಂದ ಸೋಮವಾರ `ಸುವರ್ಣ ಭೂಮಿ ಯೋಜನೆಯ ಫಲಾನುಭವಿಗಳ ಆಯ್ಕೆ~ ಪ್ರಕ್ರಿಯೆಯ ಸಮಾರಂಭದಲ್ಲಿ ಈ ಘಟನೆ ಜರುಗಿತು. 

 ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭ ಮಾಡುವ ಮೊದಲೇ ರೈತರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
`ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆಯನ್ನು ಕೈಬಿಡಬೇಕು. ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ಸುವರ್ಣ ಭೂಮಿ ಯೋಜನೆಯ ಸಹಾಯ ಧನ ನೀಡಬೇಕು ಅಥವಾ ಸರ್ಕಾರ ತಾಲ್ಲೂಕಿನ ರೈತರಿಗೆ ನೀಡಲು ಮಂಜೂರು ಮಾಡಿರುವ ಒಟ್ಟು ಹಣವನ್ನು ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ಸಮನಾಗಿ ಹಂಚಬೇಕು~ ಎಂದು ರೈತರು ಆಗ್ರಹಿಸಿದರು.

ತಕ್ಷಣವೇ ತಹಸೀಲ್ದಾರ ರಮೇಶ ಕೋನರಡ್ಡಿ ದೂರವಾಣಿಯ ಮೂಲಕ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದರು. ಸರ್ಕಾರದ ನಿಯಮವನ್ನು ಪಾಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಜಿ.ಪಂ. ಉಪಾಧ್ಯಕ್ಷ ಬೀರಪ್ಪ ಬಂಡಿ, ವಿರೋಧ ಪಕ್ಷದ ನಾಯಕ ಹೇಮಗಿರೀಶ ಹಾವಿನಾಳ, ತಾ. ಪಂ. ಉಪಾಧ್ಯಕ್ಷ ಪಿ.ಎಂ. ಪಾಟೀಲ, ತಾ.ಪಂ. ಮಾಜಿ ಅಧ್ಯಕ್ಷ ಡಿ.ಸಿ. ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಎ.ಎಸ್. ಸೂಡಿ ಹಾಗೂ ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಸಭಾಭವನದಲ್ಲಿ ಜಮಾಯಿಸಿದ್ದ ರೈತರ ಮನ ಒಲಿಸುವಲ್ಲಿ ತಹಸೀಲ್ದಾರ ರಮೇಶ ಕೋನರಡ್ಡಿ ಯಶಸ್ವಿಯಾದರು.

ಸುವರ್ಣ ಭೂಮಿ ಯೋಜನೆಗಾಗಿ ಮುಂಡರಗಿ ರೈತ ಸಂಪರ್ಕ ಕೇಂದ್ರದಿಂದ ಸಲ್ಲಿಸಲಾಗಿದ್ದ  4612 ಅರ್ಜಿಗಳಲ್ಲಿ 1400 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ ಡಂಬಳ ರೈತ ಸಂಪರ್ಕ ಕೇಂದ್ರದಿಂದ ಸಲ್ಲಿಸಲಾಗಿದ್ದ ಒಟ್ಟು 4316 ಅರ್ಜಿಗಳಲ್ಲಿ 1304 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಲ್ಲಿ ಸರ್ಕಾರ ನಿಗದಿಗೊ ಳಿಸಿದ್ದಕ್ಕಿಂತ ಕಡಿಮೆ ಅರ್ಜಿ ಬಂದಿದ್ದು, ಅರ್ಜಿ ಸಲ್ಲಿಸಿದ ಎಲ್ಲ ರೈತರಿಗೂ ಸಹಾಯಧನ ದೊರೆಯುವುದಾಗಿ ತಹಸೀಲ್ದಾರ ರಮೇಶ ಕೋನರಡ್ಡಿ ರೈತರಿಗೆ ತಿಳಿಸಿದರು.

ಅದಕ್ಕೂ ಪೂರ್ವದಲ್ಲಿ ಜಿ.ಪಂ. ಉಪಾಧ್ಯಕ್ಷ ಬೀರಪ್ಪ ಬಂಡಿ ಸಮಾರಂಭ ಉದ್ಘಾಟಿಸಿದರು. ಜಿ.ಪಂ. ವಿರೋಧ ಪಕ್ಷದ ನಾಯಕ ಹೇಮಗಿರೀಶ ಹಾವಿನಾಳ, ಪುರಸಭೆ ಉಪಾಧ್ಯಕ್ಷ ಶಿನಗೌಡ್ರ ಗೌಡ್ರ ಮೊದಲಾದವರು ಮಾತನಾಡಿದರು.

ತಾ.ಪಂ. ಸದಸ್ಯರಾದ ರಾಜಶೇಖರ ರಾಠೋಡ, ನಿಂಗಪ್ಪ ಪ್ಯಾಟಿ, ಹೆಸರೂರು ಗ್ರಾಂ. ಪಂ. ಅಧ್ಯಕ್ಷ ಗುಡದಪ್ಪ ದೇಸಾಯಿ, ಸಿಪಿಐ ಎಂ.ಎನ್. ಓಲೇಕಾರ, ಡಾ. ತಿಗರಿಮಠ, ವಜ್ರೇಶ್ವರಿ ಕುಲಕರ್ಣಿ ಮೊದಲಾವರು ಹಾಜರಿದ್ದರು.  ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಎಸ್. ಸೂಡಿ ಸ್ವಾಗತಿಸಿದರು. ಆರ್.ಬಿ. ಮುಳ್ಳಳ್ಳಿ ನಿರೂಪಿಸಿದರು. ಶ್ರಿರಾಮ ಕುಲಕರ್ಣಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.