ADVERTISEMENT

ಅನುದಾನ ಸದುಪಯೋಗ ಮಾಡಿ: ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 9:05 IST
Last Updated 14 ಫೆಬ್ರುವರಿ 2012, 9:05 IST

ಗದಗ: ವಿವಿಧ ಯೋಜನೆಗಳ ಅಡಿಯಲ್ಲಿ ಜಿಲ್ಲೆಗೆ ಬಿಡುಗಡೆಯಾದ ಎಲ್ಲ ಅನುದಾನವನ್ನು ವಿನಿಯೋಗಿಸಿಕೊಂಡು ಕಾರ‌್ಯ ಮಾಡಬೇಕು. ಯಾವುದೇ ಅನುದಾನವನ್ನು ಲೋಪ ಮಾಡಬಾರದು ಎಂದು ಜಿಲ್ಲಾ ಪಂಚಾಯಿತಿ  ಅಧ್ಯಕ್ಷೆ  ಬಸವರಾಜೇಶ್ವರಿ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಜೊತೆಗೆ ಬೇಸಿಗೆಯೂ ಪ್ರಾರಂಭವಾಗಿರುವುದರಿಂದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ತಿನ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಬೇಸಿಗೆ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ಭಯವಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಜಿಲ್ಲೆಯಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಹಾಗೂ ಮೇವಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
 
ಜಾನುವಾರುಗಳಿಗೆ ಕಾಲು ಬೇನೆ ಹಾಗೂ ಬಾಯಿ ಬೇನೆಯಂತಹ ರೋಗಗಳು ಬರುವ ಸಾಧ್ಯತೆ ಇದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಜಿ.ಪಂ. ಮುಖ್ಯ  ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಮಾರಾಟ ಪ್ರಮಾಣದಲ್ಲಿ ಕುಂಠಿತತೆ ಕಂಡು ಬಂದಿದ್ದು ಕೆಎಂಎಫ್ ಅಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿದರು. 
ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಪದ್ಧತಿಯು ಜಾರಿಯಲ್ಲಿದ್ದು ಈ ವ್ಯವಸ್ಥೆ ಎಲ್ಲ ಅಂಗನವಾಡಿಗಳಲ್ಲಿ ವ್ಯವಸ್ಥಿತವಾಗಿ ವಿತರಣೆಯಾಗುತ್ತಿರುವ ಬಗ್ಗೆ ಪರಿಶೀಲಿಸುವಂತೆ ಮಹಿಳಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 

 ಪ್ರಸಕ್ತ ಹಣಕಾಸು ವರ್ಷವು ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳುತ್ತಿದ್ದು ಸರಕಾರಿ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಅನುದಾನವನ್ನು  ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಳ್ಳಬೇಕು. ಹಾಗೂ ಯಾವುದೇ ಹಣ ಕೈ ತಪ್ಪಿ ಹೋಗದಂತೆ ನಿಗಾವಹಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.

ಯಾವುದೇ ಕಾಮಗಾರಿಗಳು ಕಳಪೆಯಾಗದಂತೆ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು. ಜಿ.ಪಂ. ಉಪಾಧ್ಯಕ್ಷೆ  ಶಾಂತವ್ವ ದಂಡಿನ, ಜಿ.ಪಂ. ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

ಅಧಿಕಾರಿಗೆ    ನೋಟಿಸ್
ಜಿಲ್ಲಾ ಪಂಚಾಯಿತಿಯ ಸಭೆಗಳಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ಜೊತೆಗೆ ಬರದಿರುವುದು, ಗೈರು ಹಾಜರಾಗುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಸಿಇಒ ವೀರಣ್ಣ ತುರಮರಿ, ಸಭೆಗೆ ಗೈರು ಹಾಜರಾದ ಮೀನುಗಾರಿಕೆ ಇಲಾಖೆ ಅಧಿಕಾರಿಗೆ ನೋಟಿಸ್ ನೀಡಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.