ADVERTISEMENT

ಅಸಮರ್ಪಕ ನೀರು ಪೂರೈಕೆ: ಅಧಿಕಾರಿಗಳ ವಿರುದ್ಧ ನಿವಾಸಿಗಳ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 5:56 IST
Last Updated 19 ಜುಲೈ 2013, 5:56 IST

ಗಜೇಂದ್ರಗಡ: ಅಸಮರ್ಪಕ ನೀರು ಪೊರೈಕೆಯ ಜತೆಗೆ ಸ್ಥಳೀಯ ಆಡಳಿತ ಸ್ವಚ್ಛತೆಗೂ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ನಗರದ 8ನೇ ವಾರ್ಡ್‌ನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ತೀವ್ರ ತರಾಟೆಗೆ ತೆಗೆದುಕೊಂಡು ನಗರದ ಪತ್ತಾರ ಗಲ್ಲಿಯಲ್ಲಿ ಪುರಸಭೆಯ ನೀರು ಸರಬರಾಜು ಸಿಬ್ಬಂದಿಯ ಅಸಮರ್ಪಕ ನೀರು ಪೊರೈಕೆ ಕ್ರಮದಿಂದ ತೀವ್ರ  ಆಕ್ರೋಶಕ್ಕೆ ಒಳಗಾದ ಇಲ್ಲಿನ ನಿವಾಸಿಗಳು ನೀರು ಬಿಡುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಮುಖ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದರು. ನಾಗರಿಕರ ಪಟ್ಟಿಗೆ ಕಟ್ಟು ಬಿದ್ದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಪತ್ತಾರ ಗಲ್ಲಿಗೆ ಆಗಮಿಸಿದರು.

ಮುಖ್ಯಾಧಿಕಾರಿಗಳು ಆಗಮಿಸುತ್ತಿದ್ದಂತೆಯೇ ನಾಗರಿಕರು `ಎಂಟು ದಿನಕ್ಕೊಮ್ಮೆ ಬಿಡುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೇವಲ ಒಂದು ಗಂಟೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ಗಂಟೆ ಬಿಡಲಾಗುವ ನೀರನ್ನು ಸಂಗ್ರಹಿಸಿಕೊಳ್ಳಲು ನಾಗರಿಕರು ಜಲಯುದ್ಧವನ್ನೇ ಮಾಡಬೇಕಾದ ಅನಿವಾರ್ಯತೆಯನ್ನು ಪುರಸಭೆ ಸೃಷ್ಟಿಸಿದೆ.

ಸಮರ್ಪಕ ನೀರು ಪೊರೈಕೆಗಾಗಿ ಇಲ್ಲಿನ ನಿವಾಸಿಗಳು ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ನಾಗರಿಕರು ಒಕ್ಕೊರಲಿನ ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಸಮರ್ಪಕ ನೀರು ಪೊರೈಸುವ ಪುರಸಭೆ ಬಡವರು, ಕೂಲಿಕಾರ್ಮಿಕರು, ಶ್ರಮಿಕರು ವಾಸಿಸುವ ಬಡಾವಣೆಗಳಲ್ಲಿ ಮಾತ್ರ ಅಸಮರ್ಪಕ ನೀರು ಪೊರೈಕೆ ಮಾಡಲಾಗುತ್ತಿದೆ. ನಿತ್ಯ ಕೂಲಿ-ನಾಲಿ ಮಾಡಿ ಬದುಕು ಸಾಗಿಸುವ

ನಾಗರಿಕರು ಪುರಸಭೆ ಪೊರೈಸುವ ಅಸಮರ್ಪಕ ನೀರು ಸಂಗ್ರಹಿಸಿಕೊಳ್ಳಲು ಒಂದು ದಿನ ಕೆಲಸ ಬಿಡಬೇಕಾದ ಅನಿವಾರ್ಯತೆ ಇದೆ ಎಂದು ಈರಣ್ಣ ಚೋಳಿನ, ಲಕ್ಷ್ವವ್ವ ಆಗನೂರ ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪತ್ತಾರ ಗಲ್ಲಿಯ ನಾಗರಿಕರ ಆರೋಪಗಳನ್ನು ತಾಳ್ಮೆಯಿಂದ ಕೇಳಿದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ `ಹಿರೇಬಜಾರದಲ್ಲಿನ ನೀರು ಸರಬರಾಜು ಪೈಪ್ ಒಡೆದ ಪರಿಣಾಮ ಪತ್ತಾರ ಗಲ್ಲಿಗೆ ನೀರು ಸಣ್ಣ ಪ್ರಮಾಣದಲ್ಲಿ ಪೊರೈಕೆಯಾಗುತ್ತಿದೆ. ಹಿರೇಬಜಾರದ ನೀರು ಸರಬರಾಜು ಪೈಪ್‌ಲೈನನ್ನು ಎರಡು ದಿನಗಳಲ್ಲಿ ಸರಿಪಡಿಸಲಾಗುವುದು. ಆ ನಂತರ ಪತ್ತಾರ ಗಲ್ಲಿಗೆ ಸಮರ್ಪಕ ನೀರು ಪೊರೈಕೆಯಾಗುತ್ತದೆ. ನಾಗರಿಕರು ಪುರಸಭೆ ಸಿಬ್ಬಂದಿಗಳೊಂದಿಗೆ ಸಹಕರಿಸಬೇಕು' ಮುಖ್ಯಾಧಿಕಾರಿಗಳು ಎಂದು ಮನವಿ ಮಾಡಿದರು .

ಸ್ವಚ್ಛತೆಗೆ ಆದ್ಯತೆ ನೀಡದ ಪುರಸಭೆ: ಪುರಸಭೆಯಲ್ಲಿನ ಸ್ವಚ್ಛತಾ ಸಿಬ್ಬಂದಿಗಳು ನೀರು ಸರಬರಾಜು ಪ್ರಕ್ರಿಯೆಯಲ್ಲಿ ಮಾತ್ರವಲ್ಲದೆ, ಸ್ವಚ್ಛತೆಯ ವಿಷಯದಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಸಮರ್ಪಕ ಸ್ವಚ್ಚತಾ ಕಾರ್ಯ ಕೈಗೊಳ್ಳುವ ಸ್ವಚ್ಛತಾ ಸಿಬ್ಬಂದಿಗಳು ಹಿಂದುಳಿದ ಹಾಗೂ ಕೂಲಿ ಕಾರ್ಮಿಕರು ವಾಸಿಸುವ ಬಡಾವಣೆಗಳಲ್ಲಿ ಸಮರ್ಪಕ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಮೂರು ನಾಲ್ಕು ತಿಂಗಳಿಗೊಮ್ಮೆ ಗಟಾರು, ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಪುರಸಭೆಯ ಸಮರ್ಪಕ ಸ್ವಚ್ಛತಾ ಕಾರ್ಯದಿಂದ ಹಿಂದುಳಿದ ಬಡಾವಣೆಗಳ ನಾಗರಿಕರು ಸಾಂಕ್ರಾಮಿಕ ಕಾಯಿಲೆಗಳ ಭೀತಿಯಲ್ಲಿ ಬದುಕು ಸಾಗಿಸುವಂತಾಗಿದೆ ಎಂದು ನೀಲಕಂಠಪ್ಪ ಡೊಳ್ಳಿನ, ಮಹಾಂತೇಶ ಆಗನೂರ ದೂರಿದರು.  ವೀರಭದ್ರಪ್ಪ ಗಾಳಿ, ರಾಜೇಸಾಬ ಅಕ್ಕಿ, ರಾಮವ್ವ ಆಗನೂರ, ಕಮಲವ್ವ ಮಂಥಾ, ಅಶ್ವಥನಾರಾಯಣ ವಿಶ್ವಬ್ರಾಹ್ಮಣ, ಶಂಕ್ರಪ್ಪ ಮಂಥಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT