ADVERTISEMENT

ಈರುಳ್ಳಿ ಬೆಲೆ ಕುಸಿತ: ಖರೀದಿದಾರರ ಜತೆ ಸಭೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 9:26 IST
Last Updated 2 ಡಿಸೆಂಬರ್ 2017, 9:26 IST

ಗದಗ: ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುವ ಈರುಳ್ಳಿಗೆ ಉತ್ತಮ ದರ ನೀಡುವಂತೆ ಖರೀದಿದಾರರಿಗೆ ಎ.ಪಿ.ಎಂ.ಸಿ ಕಾರ್ಯದರ್ಶಿ ಎಂ. ಮಂಜುನಾಥ್‌ ಸೂಚಿಸಿದರು. ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ ₹ 4 ಸಾವಿರ ದರ ಇದ್ದರೂ, ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ದಿಢೀರನೆ ₹ 1 ಸಾವಿರ ಕಡಿಮೆ ಮಾಡಿ, ಕ್ವಿಂಟಲ್‌ಗೆ ಕನಿಷ್ಠ  ₹ 400ರಿಂದ ₹ 3 ಸಾವಿರ ದರ ನಮೂದಿಸಿದ್ದರು. ಉತ್ತಮ ಬೆಲೆ ನೀಡಲು ಹಿಂದೇಟು ಹಾಕಿದ್ದರು.

ಇದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಎ.ಪಿ.ಎಂ.ಸಿ ಸಿಬ್ಬಂದಿ ಮಧ್ಯಪ್ರವೇಶಿಸಿ ಖರೀದಿದಾರರ ಮನವೊಲಿಸಿ ಹರಾಜು ಪ್ರಕ್ರಿಯೆ ಮುಂದುವರಿಸಿದ್ದರು.

ಶುಕ್ರವಾರ ಖರೀದಿದಾರರ ಜತೆಗೆ ಸಭೆ ನಡೆಸಿದ ಎ.ಪಿ.ಎಂ.ಸಿ ಕಾರ್ಯದರ್ಶಿ, ರೈತರಿಗೆ ಬೆಲೆಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಖರೀದಿದಾರರಿಗೆ ಸೂಚಿಸಿದರು.

ADVERTISEMENT

‘ಗುರುವಾರ ಗದಗ ಎ.ಪಿ.ಎಂ.ಸಿ.ಗೆ ₹ 2250 ಕ್ವಿಂಟಲ್‌ ಈರುಳ್ಳಿ ಆವಕವಾಗಿತ್ತು. ಖರೀದಿದಾರರ ಮನವೊಲಿಸಿದ ನಂತರ ಕ್ವಿಂಟಲ್‌ಗೆ ಗರಿಷ್ಠ ₹ 4 ಸಾವಿರ ದರದಲ್ಲೇ ಖರೀದಿಸಿದ್ದಾರೆ. ರೈತರಿಗೆ ಯಾವುದೇ ನಷ್ಟವಾಗಿಲ್ಲ. ಶುಕ್ರವಾರ ಕೂಡ 2050 ಕ್ವಿಂಟಲ್‌ನಷ್ಟು ಈರುಳ್ಳಿ ಬಂದಿದೆ. ಅತ್ಯಂತ ಸಣ್ಣ ಗಾತ್ರದ ಗಡ್ಡೆಗಳಿಗೆ ಕನಿಷ್ಠ ₹ 500 ಮತ್ತು ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ ₹ 3,500 ದರದಲ್ಲಿ ಮಾರಾಟವಾಗಿದೆ’ ಎಂದು ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯವಾಗಿ ಗದಗ ಮತ್ತು ಹುಬ್ಬಳ್ಳಿ ಎ.ಪಿ.ಎಂ.ಸಿ.ಯಲ್ಲಿ ಈರುಳ್ಳಿ ಖರೀದಿಸುವ ದಲ್ಲಾಳರು ಅದನ್ನು ಇಲ್ಲಿಂದ ಮಹಾರಾಷ್ಟ್ರದ ಮಾರುಕಟ್ಟೆಗೆ ಕಳುಹಿಸುತ್ತಾರೆ. ಆದರೆ, ಈಗ ಮಹಾರಾಷ್ಟ್ರದಿಂದಲೇ ರಾಜ್ಯದ ಮಾರುಕಟ್ಟೆಗೆ ಈರುಳ್ಳಿ ಬರುತ್ತಿದ್ದು, ರಾಜ್ಯದ ಈರುಳ್ಳಿಗೆ ಅಲ್ಲಿ ಬೇಡಿಕೆ ಕಡಿಮೆಯಾಗಿದೆ.

ಈಗಾಗಲೇ ಖರೀದಿಯಾಗಿರುವ ಈರುಳ್ಳಿ ಮಾರಾಟವಾಗಿಲ್ಲ. ಹೀಗಾಗಿ, ವರ್ತಕರು ಹರಾಜಿನಲ್ಲಿ ಕಡಿಮೆ ದರ ನಮೂದಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. ನವೆಂಬರ್‌ ತಿಂಗಳಲ್ಲಿ ಗದಗ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಟ್ಟು 34,475 ಕ್ವಿಂಟಲ್‌ ಈರುಳ್ಳಿ ಆವಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.