ADVERTISEMENT

ಎಚ್‌ಐವಿ: ನಾಲ್ಕು ವರ್ಷದಲ್ಲಿ 544 ಸಾವು

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆ

ಕೆ.ಎಸ್.ಸುನಿಲ್
Published 5 ಡಿಸೆಂಬರ್ 2012, 7:11 IST
Last Updated 5 ಡಿಸೆಂಬರ್ 2012, 7:11 IST

ಗದಗ: ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಎಚ್‌ಐವಿ ಸೋಂಕಿನಿಂದ 544 ಮಂದಿ ಮೃತಪಟ್ಟಿದ್ದಾರೆ. ಕಳೆದ 3-4 ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. 544 ಮಂದಿಯಲ್ಲಿ 301 ಪುರುಷರು (10 ಗಂಡು ಮಕ್ಕಳು), 243 ಮಹಿಳೆಯರು (12 ಹೆಣ್ಣು ಮಕ್ಕಳು) ಸೇರಿದ್ದಾರೆ. ಸೋಂಕಿತರಿಗೆ ಟಿ.ಬಿ., ವಿಪರೀತ ಜ್ವರ ಆವರಿಸಿ ಸಾವಿಗೀಡಾಗಿರುವುದನ್ನು ಹೊರತುಪಡಿಸಿದರೇ ನಿರ್ದಿಷ್ಟವಾಗಿ ಏಡ್ಸ್‌ನಿಂದಾಗಿ ಮೃತಪಟ್ಟಿರುವುದು ಇಲ್ಲ ಎಂಬುದು ಆರೋಗ್ಯ ಇಲಾಖೆ ನೀಡುವ ಅಂಕಿ ಅಂಶ.

ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ 2007ರಲ್ಲಿದ್ದ ಶೇ. 1.13 ರಿಂದ 2012ರಲ್ಲಿ  ಶೇ. 0.30ಗೆ ಇಳಿದಿದೆ. 2009ರಲ್ಲಿ ತಪಾಸಣೆಗೆ ಒಳಪಟ್ಟ 10,016 ಜನರ ಪೈಕಿ 1,006 ಮಂದಿಗೆ ಎಚ್‌ಐವಿ ಸೋಂಕು ತಗುಲಿತ್ತು. 2010ರಲ್ಲಿ 1,110 ಮಂದಿಗೆ,  2011ರಲ್ಲಿ 1078 ಹಾಗೂ 2012ರ ನವೆಂಬರ್ ತಿಂಗಳ ಅಂತ್ಯಕ್ಕೆ 830 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ಕೊಪ್ಪಳ, ಧಾರವಾಡ, ಬಾಗಲಕೋಟೆ ಜನರು ಜಿಲ್ಲೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಹೆಚ್ಚಳವಾಗಿದೆ ಎಂಬುದು ಅಧಿಕಾರಿಗಳು ನೀಡುವ ವಿವರಣೆ.

ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದ ವ್ಯಕ್ತಿಗೆ ಎಚ್‌ಐವಿ ಸೋಂಕು ತಗುಲಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು 3 ರಿಂದ 6 ತಿಂಗಳ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂರು ವಿಧದ ಪರೀಕ್ಷೆ ನಡೆಸಲಾಗುತ್ತದೆ. ಮೂರು ಪರೀಕ್ಷೆಗಳಲ್ಲೂ ಪಾಸಿಟಿವ್ ಬಂದರೆ ಸೋಂಕು ಇರುವ ನಿರ್ಧಾರಕ್ಕೆ ಬರಲಾಗುತ್ತದೆ.

ಸೋಂಕಿತರ ಸಿ.ಡಿ. 4 ಪ್ರಮಾಣ 350ಕ್ಕಿಂತ ಕಡಿಮೆ ಇದ್ದರೆ ಎಅರ್‌ಟಿ ಚಿಕಿತ್ಸೆ ನೀಡಲಾಗುತ್ತದೆ. 350ಕ್ಕಿಂತ ಮೇಲ್ಪಟ್ಟರೆ ಔಷಧ ಇಲ್ಲದೆ ಯಾವ ರೀತಿ ಜೀವನ ನಡೆಸಬಹುದು ಎಂಬುದನ್ನು ಆಪ್ತ ಸಮಾಲೋಚಕರು ಸಲಹೆ ನೀಡಲಿದ್ದಾರೆ.

2009ರಲ್ಲಿ ಎಆರ್‌ಟಿ (ಆ್ಯಂಟಿ ರಿಟ್ರೊ ವೈರಲ್ ಥೆರಪಿ) ಕೇಂದ್ರ ಆರಂಭಿಸಲಾಯಿತು. ಎಆರ್‌ಟಿ ಚಿಕಿತ್ಸೆಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ 13,966. ಅದರಲ್ಲಿ 1,919 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಿರಿಯ ಮಹಿಳಾ ಆರೋಗ್ಯ ಸಹಾಯಕರ ಬಳಿ ಹೆಸರು ನೋಂದಾಯಿಸಿದ ಗರ್ಭಿಣಿಯರಿಗೆ ಕಡ್ಡಾಯವಾಗಿ ಎಚ್‌ಐವಿ ಪರೀಕ್ಷೆ ಮಾಡಲಾಗುತ್ತದೆ. ಸೋಂಕಿತ ಗರ್ಭಿಣಿಯರು ಯಶಸ್ವಿನಿ ಸೌಲಭ್ಯಕೆ ಒಳಪಡುವುದರಿಂದ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.

ಎಚ್‌ಐವಿ ಸ್ಥಿತಿಗತಿ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ.ಲಾಳಗಟ್ಟಿ, `ಎಚ್‌ಐವಿ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ  ಕಡಿಮೆ ಯಾಗುತ್ತಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಪಡೆದು ಸೋಂಕು ತಗುಲಿರುವವರು ಭಯ ಹಾಗೂ ಆತಂಕ ಪಡುವ ಅಗತ್ಯ ಇಲ್ಲ. ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಲ್ಲ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಎಚ್‌ಐವಿ ಪರೀಕ್ಷೆ ಮತ್ತು ಆಪ್ತ ಸಮಾಲೋಚನೆ ಸೌಲಭ್ಯ ಉಂಟು.

ಹಾಗೆಯೇ ಪಾಲಕರಿಂದ ಮಕ್ಕಳಿಗೆ ಎಚ್‌ಐವಿ ಸೋಂಕು ಹರಡುವುದನ್ನು ತಡೆಗಟ್ಟಲು ಎಆರ್‌ವಿ ತಾತ್ಕಾಲಿಕ ಔಷಧ ನೀಡಲಾಗುತ್ತಿದೆ. ಇದರಿಂದಾಗಿ ಸೋಂಕಿನ ಪ್ರಮಾಣ ಶೇ. 30ರಿಂದ 5ಕ್ಕೆ ಇಳಿದಿರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಕೆಲ ರಾಜ್ಯಗಳಲ್ಲಿ ಏಡ್ಸ್‌ಗೆ ಔಷಧಿ ನೀಡಲಾಗುತ್ತಿದೆ ಎಂದು ಜನರಿಂದ ಹಣ ಸುಲಿಗೆ ಮಾಡ ಲಾಗುತ್ತಿದೆ. ಈ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ' ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.