ADVERTISEMENT

ಎತ್ತುಗಳಿಗೆ ಕಾಲುಬೇನೆ: ರೈತ ಕಂಗಾಲು

ಪ್ರಜಾವಾಣಿ ವಿಶೇಷ
Published 22 ಡಿಸೆಂಬರ್ 2012, 6:53 IST
Last Updated 22 ಡಿಸೆಂಬರ್ 2012, 6:53 IST

ಗಜೇಂದ್ರಗಡ: ರೈತ ಮಿತ್ರ ಎತ್ತುಗಳನ್ನು ಕಾಲು ಬೇನೆ ವ್ಯಾಪಕವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನೆಡೆ ಉಂಟಾಗಿದ್ದು, ರೈತ ಸಮೂಹವನ್ನು ಚಿಂತೆಗೀಡು ಮಾಡಿದೆ.   

ಎತ್ತುಗಳನ್ನು ಬಳಸಿ ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂಬ ನಂಬಿಕೆ ಯಲ್ಲಿರುವವರು ಇಂದಿಗೂ ಎತ್ತುಗಳನ್ನು ಬಳಸಿಯೇ ಕೃಷಿ ಮಾಡುತ್ತಿದ್ದಾರೆ. ಆದರೆ, ಎತ್ತು ಗಳಿಗೆ ಎದುರಾಗಿರುವ ಕಾಲು ಬೇನೆ ಸಮಸ್ಯೆ ರೈತ ಸಮೂಹಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಲ್ಲಿ ಕೃಷಿ ಮತ್ತು ಪಶು ಸಂಗೋಪನೆ ಒಂದನ್ನೊಂದು ಅವಲಂಬಿಸಿವೆ. ಹೀಗಾಗಿಯೇ 72,480 ಜಾನುವಾರುಗಳು ಹಾಗೂ 1,35, 000 ಕುರಿ ಮತ್ತು ಮೇಕೆಗಳಿವೆ. ಇದರಲ್ಲಿ ಶೇ.42 ರಷ್ಟು ಎತ್ತುಗಳಿವೆ.  ಆದರೆ, ಮೊದಲೇ ಹೊಟ್ಟು-ಮೇವಿನ ಸಮಸ್ಯೆ ಎದುರಿಸುತ್ತಿರುವ ರೈತರುಗಳಿಗೆ ಎತ್ತುಗಳಿಗೆ ಕಾಲು ಬೇನೆ ಕಾಣಿಸಿಕೊಂಡಿರುವುದರಿಂದ ನೇಗಿಲ ಯೋಗಿಯ ಜಂಘಾಬಲವನ್ನೇ ಉಡುಗಿಸಿದಂತಾಗಿದೆ  ಎಂದು ರೈತರಾದ ಮುನ್ನಾ ಬಾನಿ, ಯಂಕಪ್ಪ ಬಲಬುಣಚಿ ಅವರ ಅಳಲು.

ಕಾಲು ಬೇನೆಗೆ ಕಾರಣ: ಕಳೆದ ಎರಡು ವರ್ಷಗಳಿಂದ ಭೀಕರ ಬರ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳು ಕಳೆದ ಕೆಲ ದಿನಗಳ ಹಿಂದೆ ಸುರಿದ `ನೀಲಂ' ಚಂಡು ಮಾರುತದ ಪರಿಣಾಮವಾಗಿ ತಾಲ್ಲೂ ಕಿನಾದ್ಯಂತ ಸುರಿದ ಅಲ್ಪ ಪ್ರಮಾಣದ ಮಳೆ ಯಿಂದಾಗಿ ಕೃಷಿ ಚಟುವಟಿಕೆಗಳು ತೀವ್ರಗೊಂಡವು. ಬೆಳೆಯನ್ನು ಕಸದಿಂದ ಮುಕ್ತಿಗೊಳಿಸಿದರೆ ಮಾತ್ರ ನಿರೀಕ್ಷೆಗೆ ತಕ್ಕಂತೆ ಇಳುವರಿ ಬರಲು ಸಾಧ್ಯ.

ಹೀಗಾಗಿ ಕೃಷಿ ಕಾರ್ಮಿಕರನ್ನು ಬಳಸಿ ಕಳೆ ನಿರ್ವಹಣೆಗೆ ಮುಂದಾದರೆ, ದೊಡ್ಡ ಮೊತ್ತದ ಕೂಲಿಯಾಗುತ್ತದೆ. ಆದ್ದರಿಂದ ಎತ್ತುಗಳನ್ನು ಬಳಸಿ ಯಡಿ ಹೊಡಿದರೆ ಕಡಿಮೆ ಖರ್ಚಿನಲ್ಲಿ ಕಳೆಗೆ ಮುಕ್ತಿ ಕೊಡಿಸಲು ಸಾಧ್ಯ ಎಂಬ ನಂಬಿಕೆಯಲ್ಲಿರುವ ರೈತರು ಎತ್ತುಗಳನ್ನು ಬಳಸಿ ಯಡಿ ಕಾರ್ಯಕ್ಕೆ ಮುಂದಾಗಿರುವುದರಿಂದಲೇ ರೈತ ಮಿತ್ರನಿಗೆ ಕಾಲುಬೇನೆ ಬರಲು ಕಾರಣ.

ರೋಗದ ಲಕ್ಷಣಗಳು: ಆರಂಭದಲ್ಲಿ ಪಾದದ ಮೇಲ ಭಾಗದಲ್ಲಿ ಕೆರೆತ ಕಾಣಿಸಿಕೊಳ್ಳುತ್ತದೆ. ಕೆರೆತ ಇದ್ದ ಭಾಗವನ್ನು ಎತ್ತು ನಾಲಿಗೆಯಿಂದ ಜೋರಾಗಿ ನೆಕ್ಕುತ್ತದೆ. ಕೆರತ ವ್ಯಾಪಕವಾದಾಗ ಗಾಯವಾಗುತ್ತದೆ. ಈ ಗಾಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದಾಗ ಗಾಯ ಉಲ್ಭಣಗೊಂಡು ಕಾಲುಗಳಲ್ಲಿ ಹುಳುಗಳು ಬೀಳುತ್ತವೆ. ಇದರಿಂದಾಗಿ ಎತ್ತುಗಳು ನರಕ ಸದೃಷ್ಯ ಚಿತ್ರ ಹಿಂಸೆಯನ್ನು ಅನುಭವಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT