ಗದಗ: ಅಖಿಲ ಭಾರತೀಯ ಪರಿಷತ್‌ನ 30ನೇ ರಾಜ್ಯ ಸಮ್ಮೇಳನವನ್ನು ಮಾರ್ಚ್ 13ರಿಂದ 15ರವರೆಗೆ ನಗರದ ಸ್ವಾಮಿ ವಿವೇಕಾನಂದ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಜಿ.ಬಿ. ಪಾಟೀಲ ಹೇಳಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸ್ಥಳಕ್ಕೆ ಕುಮಾರವ್ಯಾಸ ನಗರ ಎಂದು, ಸಭಾಂಗಣಕ್ಕೆ ಪಂಡಿತ ಪುಟ್ಟರಾಜ ಗವಾಯಿ ಮತ್ತು ಮಹಾದ್ವಾರಕ್ಕೆ ಭೀಮಸೇನ ಜೋಶಿ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
‘ಮಾ. 13ರಂದು ಪ್ರದರ್ಶಿನಿ ಉದ್ಘಾಟನೆ ನಡೆಯಲಿದ್ದು, ಪರಿಷತ್‌ನ ರಾಜ್ಯವ್ಯಾಪಿ ಚಟುವಟಿಕೆಗಳು ಹಾಗೂ ಆಂದೋಲನಗಳನ್ನು ಪ್ರದರ್ಶಿಸಲಾಗುವುದು. ಮಾ. 14ರಂದು ಬೆಳಿಗ್ಗೆ 9.30ಕ್ಕೆ ಸ್ವಾಮಿ ವಿವೇಕಾನಂದ ಯೂಥ್ ಮೂವಮೆಂಟ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ಆರ್. ಬಾಲಸುಬ್ರಹ್ಮಣ್ಯಂ ಸಮ್ಮೇಳನ ಉದ್ಘಾಟಿಸಲಿದ್ದು, ವಿಆರ್‌ಎಲ್‌ನ ಅಧ್ಯಕ್ಷ ವಿಜಯ ಸಂಕೇಶ್ವರ ಅತಿಥಿಯಾಗಿ ಭಾಗವಹಿಸುವರು. ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಡಾ. ಶ್ರೀನಿವಾಸ ಬಳ್ಳಿ, ಕಾರ್ಯದರ್ಶಿ ವಿನಯ ಬಿದರೆ ಹಾಜರಿರುವರು.
ನಂತರ 11.30ಕ್ಕೆ ನಡೆಯಲಿರುವ ವಿಶೇಷ ಭಾಷಣದಲ್ಲಿ ಪರಿಷತ್ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್. ರಘುನಂದನ ಅವರು ‘ಭಾರತದ ವರ್ತಮಾನ ಪರಿಸ್ಥಿತಿ’ ವಿಷಯ ಕುರಿತು ಮಾತನಾಡುವರು. ಸಂಜೆ ಐದು ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿನಿಧಿಗಳ ಶೋಭಾಯಾತ್ರೆ, ನಂತರ ಸಾರ್ವಜನಿಕ ಸಭೆ ನಡೆಯಲಿದೆ. ಎಬಿವಿಪಿಯ ಕಾರ್ಯದರ್ಶಿ ವಿನಯ ಬಿದರೆ ಭಾಷಣ ಮಾಡುವರು. ಮಾ. 15ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ‘ಸಾಮಾಜಿಕ ಕಳಕಳಿ- ನಮ್ಮ ದೃಷ್ಟಿಕೋನ’ ಕುರಿತು ಉಪನ್ಯಾಸ ನೀಡುವರು. ಸುನೀಲ ಅಂಬೇಕರ್ ಮಾತನಾಡುವರು’ ಎಂದು ತಿಳಿಸಿದರು.
ಸಮ್ಮೇಳನಕ್ಕೆ ವಿವಿಧ ಭಾಗಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಉತ್ತರ ಕರ್ನಾಟಕದ ರುಚಿರುಚಿಯಾದ ವಿಶೇಷ ಖಾದ್ಯಗಳ ವ್ಯವಸ್ಥೆ ಮಾಡಲಾಗಿದೆ
ಕಡಕ್ ರೊಟ್ಟಿ, ಕೂರ್ಮಾ ಬಾಜಿ, ಮಜ್ಜಿಗೆ, ವಿವಿಧ ತರಕಾರಿ, ಮಡಿಕೆ ಕಾಳು, ಕಾಳುಗಳ ಪಲ್ಯೆ, ಶೇಂಗಾ ಚಟ್ನಿ, ಶೇಂಗಾ ಹೋಳಿಗೆ, ಮಿರ್ಚಿ, ಬದನೆಕಾಯಿ ಭಜಿ ನೀಡಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ಜಯದೇವ ಮೆಣಸಗಿ, ದತ್ತುಪ್ರಸನ್ನ ಪಾಟೀಲ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.