ADVERTISEMENT

ಎಲ್ಲ ಸಾಲಗಳ ಸಂಪೂರ್ಣ ಮನ್ನಾ

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 10:45 IST
Last Updated 6 ಮೇ 2018, 10:45 IST

ಗಜೇಂದ್ರಗಡ: ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿನ ₹51 ಸಾವಿರ ಕೋಟಿ ರೈತರ ಸಾಲದ ಜತೆಗೆ ಟ್ರ್ಯಾಕ್ಟರ್, ಸ್ವಸಹಾಯ ಗುಂಪುಗಳ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ’ ಎಂದು ಜೆ.ಡಿ.ಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಪಕ್ಕದ ಬಯಲು ಜಾಗೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಣ ಮತಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಅವರ ಪರ ಪ್ರಚಾರ ಭಾಷಣ ಮಾಡಿದರು.

‘ಹಲವರು ಹೇಳುತ್ತಿದ್ದಾರೆ ಕುಮಾರ ಸ್ವಾಮಿ ಅವರು ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬರಬೇಕಲ್ಲ ಎನ್ನುತ್ತಿದ್ದಾರೆ. ನಾನು ಎಲ್ಲೂ ನಮ್ಮದೇ ಸರ್ಕಾರ ಬರುತ್ತದೆ ಎಂದು ಹೇಳಿಲ್ಲ. ನೀವು ಆಶೀರ್ವಾದ ಮಾಡಿದರೆ ನಮ್ಮದೇ ಸ್ವತಂತ್ರ ಸರ್ಕಾರ ರಚಿಸಲು ಕಷ್ಟವಿಲ್ಲ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ’ ಎಂದರು.

ADVERTISEMENT

ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ‘ಹಲವು ದಕ್ಷ ಅಧಿಕಾರಿಗಳ ಕೊಲೆ ಮಾಡಿಸಿದ, ಮಹದಾಯಿ ನೀರು ಕೇಳಿದರೆ ಬಾಸುಂಡೆ ನೀಡಿದ ಕಾಂಗ್ರೆಸ್ ಮತ್ತು ‘ಸಬ್ ಕಾ ಸಾಥ್‌ ಸಬ್ ಕಾ ವಿಕಾಸ್’ ಎಂದು ವಿದೇಶ ಸುತ್ತುತ್ತಿರುವ, ಮಹದಾಯಿ ಕುರಿತು ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ ಅವರ ಬಿ.ಜೆ.ಪಿ ಕಮರ್ಷಿಯಲ್ ಪಕ್ಷಗಳು’ ಎಂದರು.

ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶರವಣ, ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಅಲ್ತಾಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.