ADVERTISEMENT

ಎಸ್‌ಎಸ್‌ಎಲ್‌ಸಿ: ಜಿಲ್ಲೆಗೆ 32ನೇ ಸ್ಥಾನ

ಫಲ ನೀಡದ ಫಲಿತಾಂಶ ಸುಧಾರಣಾ ಕ್ರಮ; 19 ಸ್ಥಾನಗಳಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 12:46 IST
Last Updated 8 ಮೇ 2018, 12:46 IST

ಗದಗ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಕಳಪೆ ಸಾಧನೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶ ಪಟ್ಟಿಯಲ್ಲಿ 19 ಸ್ಥಾನಗಳಷ್ಟು ಇಳಿಕೆ ಕಂಡಿದ್ದು, 32ನೇ ಸ್ಥಾನಕ್ಕೆ ಕುಸಿದಿದೆ.

ಶೇಕಡವಾರು ಫಲಿತಾಂಶವೂ ಕಳೆದ ವರ್ಷದ ಶೇ 75.62ರಿಂದ ಶೇ 67.52ಕ್ಕೆ ಇಳಿಕೆಯಾಗಿದೆ. 2017ನೇ ಸಾಲಿನಲ್ಲಿ ಶೇ 75.62ರಷ್ಟು ಫಲಿತಾಂಶ ದಾಖಲಿಸಿ ಜಿಲ್ಲೆ ಫಲಿತಾಂಶ ಪಟ್ಟಿಯಲ್ಲಿ 13ನೇ ಸ್ಥಾನಕ್ಕೆ ಏರಿತ್ತು.

ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳನ್ನು ಹಿಂದಿಕ್ಕಿ, ಹೊಸ ಮೈಲಿಗಲ್ಲು ನಿರ್ಮಿಸಿತ್ತು. ಆದರೆ, ಈ ಬಾರಿ ಎಲ್ಲ ನಿರೀಕ್ಷೆಗಳು ತಲೆಕೆಳಗಾಗಿದ್ದು, ಮತ್ತದೇ ಹಿಂದಿನ ಸಾಂಪ್ರದಾಯಿಕ ಸ್ಥಾನ ಉಳಿಸಿಕೊಂಡಿದೆ.

ADVERTISEMENT

2016ರಲ್ಲಿ ಶೇ 64.09ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯು 33ನೇ ಸ್ಥಾನದಲ್ಲಿತ್ತು. 2017ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ಶೇ 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ, ಅಂತಹ ಶಾಲೆಗಳನ್ನು ಅಧಿಕಾರಿಗಳಿಗೆ ದತ್ತು ನೀಡಲಾಗಿತ್ತು. ಈ ಶಾಲೆಗಳ ಫಲಿತಾಂಶ ಸುಧಾರಿಸುವ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು.

ಈ ಪ್ರಯೋಗ ಯಶಸ್ವಿಯಾಗಿದ್ದರಿಂದ ಮತ್ತೆ 13ನೇ ಸ್ಥಾನಕ್ಕೆ ಏರಿತ್ತು. ಈ ಬಾರಿಯೂ ಫಲಿತಾಂಶ ಪಟ್ಟಿಯಲ್ಲಿ ಮೊದಲ 10 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಾಲೆ ದತ್ತು ಯೋಜನೆ, ರಾತ್ರಿ ಪಾಠ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ಕಾರ್ಯಕ್ರಮ, ಗಣಿತ, ಇಂಗ್ಲಿಷ್‌ ವಿಷಯಗಳಿಗೆ ವಿಶೇಷ ಕಾರ್ಯಾಗಾರ, ಸಂವಾದ, ವಿಷಯಗಳ ಪುನರಾವರ್ತನೆ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಗ್ರಾಮೀಣ ಭಾಗದ ಫಲಿತಾಂಶ ಸುಧಾರಿಸಲು ವಿಶ್ವಾಸ ಕಿರಣ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಇವು ಯಾವುದೂ ಫಲ ನೀಡಲಿಲ್ಲ. ಎಲ್ಲಿ ಲೋಪವಾಗಿದೆ ಎನ್ನುವುದರ ಕುರಿತು ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.