ADVERTISEMENT

ಏಡ್ಸ್: ಜನಾಂದೋಲನ ಮೂಡಿಸುವುದು ಅವಶ್ಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 12:25 IST
Last Updated 28 ಜನವರಿ 2012, 12:25 IST

ಗದಗ: ಏಡ್ಸ್ ಭಯಾನಕ ಕಾಯಿಲೆಯಾಗಿದ್ದು, ಮನುಕುಲಕ್ಕೆ ಮಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ `ಒಂದೇ ಹೆಜ್ಜೆ~ ಯುವ ಜಾಗೃತಿ ಆಂದೋಲನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಡ್ಸ್ ಕುರಿತು ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ರೋಗ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದೆ. ಯುವ ಪೀಳಿಗೆಗೆ ಆರೋಗ್ಯದ ಕುರಿತು ಜಾಗೃತಿ ನೀಡುವಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ವಯಂಸೇವಾ ಸಂಘಟನೆಗಳು ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಕೃಷ್ಣ ಹೊಂಬಾಳಿ ಮಾತನಾಡಿ, ಜನರಲ್ಲಿ ತುಂಬಿರುವ ಅಜ್ಞಾನ ಹಾಗೂ ಮೌಢ್ಯತೆಯಿಂದಾಗಿ ಹಲವಾರು ಮಾರಕ ಕಾಯಿಲೆಗಳು ದೇಶವ್ಯಾಪಿ ಹರಡುತ್ತಿವೆ. ಸುಶಿಕ್ಷಿತ ಯುವಪೀಳಿಗೆ ಏಡ್ಸ್ ಮುಕ್ತ ದೇಶ ನಿರ್ಮಾಣಕ್ಕಾಗಿ ಪಣ ತೊಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ಎನ್. ಗೊಡಬೋಲೆ ಮಾತನಾಡಿ, ಏಡ್ಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸುತ್ತಿದೆ. ಇದು ದೇಶದ ಆರ್ಥಿಕ ವ್ಯವಸ್ಥೆಗೆ ತೊಡಕಾಗಿದೆ. ಪ್ರಜ್ಞಾಪೂರ್ಣ ಸಾರ್ವಜನಿಕರಿಂದಾಗಿ ದೇಶದಲ್ಲಿ ಪೋಲಿಯೋ ಕಾಯಿಲೆಯನ್ನು ಹತೋಟಿಗೆ ತರುವಲ್ಲಿ ಹಂತ ಹಂತವಾಗಿ ಯಶಸ್ಸು ಸಾಧಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾಂತವ್ವ ದಂಡಿನ ಕಾರ್ಯಕ್ರಮ ಉದ್ಘಾಟಿಸಿ, ಮುಂಜಾಗೃತೆಯಿಂದ ಏಡ್ಸ್ ನಿಯಂತ್ರಣ ಸಾಧ್ಯವಾಗಲಿದೆ. ಈ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಿ ರೋಗಮುಕ್ತ ದೇಶ ನಿರ್ಮಾಣ ಮಾಡಲು ಯುವಕರು ಶ್ರಮಿಸಬೇಕು ಎಂದರು.

ಪ್ರಾಚಾರ್ಯ ಬಿ.ಬಿ. ಗೌಡರ, ವೈದ್ಯಾಧಿಕಾರಿ ವೈ.ಕೆ. ಭಜಂತ್ರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ.ಬಿ. ಚನ್ನಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಆರ್.ಎನ್. ಪಾಟೀಲ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಅರುಂಧತಿ  ಮತ್ತಿತರರು ಹಾಜರಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡಗಟ್ಟುವಿಕೆ ಮತ್ತು ನಿಯಂತ್ರಣ ಘಟಕ,  ವಾರ್ತಾ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜಿಲ್ಲಾ ರಕ್ಷಣೆ ಒಕ್ಕೂಟ, ಸಮೂಹ, ನವಚೇತನ, ಧ್ವನಿ ಸಂಸ್ಥೆ, ಎನ್‌ಸಿಸಿ,  ಎನ್‌ಎಸ್‌ಎಸ್ ಘಟಕ, ಮದರ ಥೇರೆಸಾ ಹಾಗೂ ಮಹೇಶ್ವರಿ ನರ್ಸಿಂಗ್  ಸ್ಕೂಲ್, ಕಿರಿಯ ಮಹಿಳಾ ಆರೋಗ್ಯ ಸಹಾಯಕ ತರಬೇತಿ ಕೇಂದ್ರ ಮಲ್ಲಸಮುದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಸವೇಶ್ವರ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಮಹಿಳಾ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರ‌್ಯಾಲಿ:

`ಒಂದೇ ಹೆಜ್ಜೆ~ ಯುವ ಜಾಗೃತಿ ಆಂದೋಲನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರದ ಮುನ್ಸಿಪಲ್ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರ‌್ಯಾಲಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಆರ್.ಎನ್. ಪಾಟೀಲ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿರುವ ಏಡ್ಸ್  ಕುರಿತ ತಪ್ಪು ಕಲ್ಪನೆ ಹೋಗಲಾಡಿಸಿ ಅರಿವು ಮೂಡಿಸುವ ಕಾರ್ಯಕ್ಕೆ ಸಾರ್ವಜನಿಕ ಸೇವಾ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡಿ ಸಹಕರಿಸಬೇಕು. ಈ ನಿಟ್ಟಿನಲ್ಲಿ ಅವುಗಳ ಸಹಕಾರ ಅವಶ್ಯ ಎಂದರು.
ರ‌್ಯಾಲಿಯಲ್ಲಿ ವಿವಿಧ ಕಾಲೇಜು ಹಾಗೂ ಸಂಘ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಜಾವಾಣಿ ವಾರ್ತೆ
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಜನತಾ ಬಜಾರದ ವೀರಪ್ಪ  ಸೊಪ್ಪಿನವರ ಕಟ್ಟಡದಲ್ಲಿ ಈಚೆಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಾಖೆಯನ್ನು ಆರಂಭಿಸಲಾಯಿತು.
ವಿದ್ಯಾಲಯದ ಮೇಲ್ವಿಚಾರಕರಾದ ಬಿ.ಕೆ. ಜಯಂತಿ ಅವರು ನೂತನ ಶಾಖೆಯನ್ನು ಉದ್ಘಾಟಿಸಿ, ಗ್ರಾಮೀಣ ಜನತೆಗೆ ಆತ್ಮಜ್ಞಾನ ನೀಡಲು ಈ ಶಾಖೆಯನ್ನು ಆರಂಭಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಪರಮಾತ್ಮನಿಗೆ ಹತ್ತಿರವಾಗಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ ಮುಸ್ಕಿನಬಾವಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಬಿ.ಕೆ. ಸರೋಜಾ, ವೀರಪ್ಪ ಸೊಪ್ಪಿನ, ವಿ.ಐ. ಬಡಿಗೇರ, ಪ್ರೇಮಾ ಮಟ್ಟಿ, ಆರ್.ಎನ್. ಗೌಡರ, ಅಶೋಕ ಕಂಚಗಾರ, ಶಕುಂತಲಾ ತಿಮ್ಮಾಪೂರ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.