ADVERTISEMENT

ಒಂಟೆ ಓಟ, ಆನೆ ಆಟ, ನಾಯಿ ಕಾಟ...

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 7:30 IST
Last Updated 23 ಜುಲೈ 2012, 7:30 IST

ಗದಗ: ಹಗ್ಗದ ಮೇಲಿನ ನಡಿಗೆ, ಆನೆಯ ಬ್ಯಾಟಿಂಗ್, ಫೈರ್ ಡ್ಯಾನ್ಸ್, ಜೋಕರ್‌ಗಳ ಹಾಸ್ಯದಾಟ, ಒಂಟೆಗಳ ಓಟ, ವಿದೇಶಿ ನಾಯಿ- ಗಿಳಿಗಳ ಸಾಹಸಗಳು ನೋಡಬೇಕೆ...

ಹಾಗಾದರೆ ನಗರದ ಆಂಗ್ಲೋ ಉರ್ದು ಶಾಲೆ ಮೈದಾನದಲ್ಲಿ ನಡೆಯುತ್ತಿರುವ ಕೇರಳ ಮೂಲದ ಜಂಬೋ ಸರ್ಕಸ್‌ಗೆ ಬನ್ನಿ. ಈ ಮೈದಾನ ನಗರದ ಜನತೆಯ ಆಕರ್ಷಣೆಯ ಕೇಂದ್ರವಾಗಿದೆ.

ಮನರಂಜನೆಗಾಗಿ ಸಿನಿಮಾ ಮತ್ತು ನಾಟಕ ನೋಡುತ್ತಿದ್ದ ಅವಳಿ ನಗರದ ಜನತೆಗೆ ಸರ್ಕಸ್ ನೋಡುವ ಅವಕಾಶ ದೊರೆತಿದೆ. ಜಂಬೋ ಸರ್ಕಸ್‌ನಲ್ಲಿ ಆಫ್ರಿಕಾ ಖಂಡದ ಎಂಟು ಕಲಾವಿದರು  ಮತ್ತು ಮಣಿಪುರದ 17 ಕಲಾವಿದರ ತಂಡ ಪ್ರದರ್ಶಿಸುವ ವಿವಿಧ ಕಸರತ್ತುಗಳು ಪ್ರೇಕ್ಷಕರ ಮನ ಸೆಳೆಯುತ್ತದೆ.

ADVERTISEMENT

ಮಹಿಳಾ ಕಲಾವಿದರ ಪಿರಾಮಿಡ್ ರಚನೆ, ಆಫ್ರಿಕದ ಸಾಂಪ್ರದಾಯಿಕ ಸಂಗೀತದೊಂದಿಗೆ ಬೆಂಕಿಯ  ನೃತ್ಯ, ಎರಡು ಕೋಲು ಹಿಡಿದು ಮೇಲಕ್ಕೆ ಚಲಿಸುತ್ತ ಒಂದು ಕೋಲಿನಿಂದ ಇನ್ನೊಂದು ಕೋಲಿಗೆ ಜಿಗಿಯುವ ವಿಶಿಷ್ಟ ನೃತ್ಯ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತವೆ.

ಅದರಲ್ಲೂ ಯುವತಿಯೊಬ್ಬಳು ಯಾರ ಸಹಾಯವೂ ಇಲ್ಲದೆ ಹಗ್ಗದ ಮೇಲೆ ನಡೆಯುವ ದೃಶ್ಯ ಸೂಜಿಗಲ್ಲಿನಂತೆ ಎಲ್ಲರನ್ನೂ ಆಕರ್ಷಿಸುತ್ತದೆ. ಇನ್ನೂ ಆನೆಯ ಬ್ಯಾಟಿಂಗ್ ಚಪ್ಪಾಳೆಯ ಸುರಿಮಳೆ. ಜೋಕರ್‌ಗಳ ಪ್ರತಿ ಎಸೆತವನ್ನು ಬೌಂಡರಿ ಅಟ್ಟುವ ದೃಶ್ಯ ನೋಡಲು ಸುಂದರವಾಗಿರುತ್ತದೆ.

ಬಳಿಕ ತೆಂಗಿನ ಕಾಯಿ ಒಡೆದು ಶಿವನಿಗೆ ಪೂಜೆ ಮಾಡುವುದು, ಪ್ರದರ್ಶನದ ನಡುವೆ ಜೋಕರ್‌ಗಳ ಹಾಸ್ಯದಾಟ, ಮಕ್ಕಳು ಸೈಕಲ್ ಅನ್ನು ಯುವತಿ ಸರಾಗವಾಗಿ ಓಡಿಸುವುದು ಮನಮೋಹಕವಾಗಿವೆ. ವಿದೇಶಿ ನಾಯಿ ಮತ್ತು ಗಿಳಿಗಳ ಸಾಹಸ ಮಕ್ಕಳಿಗೆ ಮನರಂಜನೆ ನೀಡಲಿದೆ.

ಗದುಗಿಗೆ ಬರುವ ಮುನ್ನ ಮಂಗಳೂರು, ಉಡುಪಿ ಮತ್ತು ರಾಣೇ ಬೆನ್ನೂರನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಜಂಬೋ ಸರ್ಕಸ್ ಆಗಸ್ಟ್ ಮೊದಲ ವಾರ ದವರೆಗೆ ನಗರದಲ್ಲಿ ಪ್ರದರ್ಶನ ನೀಡಲಿದೆ.

ಮೂರು ವರ್ಷದ ಹಿಂದೆ ಗದುಗಿನಲ್ಲಿ ಏರ್ಪಡಿಸಿದ್ದಾಗಲೂ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಪ್ರದರ್ಶನದ ಸಮಯ ಪ್ರತಿದಿನ ಮಧ್ಯಾಹ್ನ 1ರಿಂದ 3.30, ಸಂಜೆ 4 ರಿಂದ 4.30 ಮತ್ತು 7ರಿಂದ 9.30ರವರೆಗೆ. ಪ್ರವೇಶ ದರ ರೂ. 50, ರೂ. 100 ಮತ್ತು ರೂ. 150.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.