ADVERTISEMENT

ಕನ್ನಡ ಭಾಷೆ ನಾಡಿನ ಅಸ್ತಿತ್ವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 12:10 IST
Last Updated 10 ಮಾರ್ಚ್ 2011, 12:10 IST
ಕನ್ನಡ ಭಾಷೆ ನಾಡಿನ ಅಸ್ತಿತ್ವ
ಕನ್ನಡ ಭಾಷೆ ನಾಡಿನ ಅಸ್ತಿತ್ವ   

ರೋಣ: ‘ಕನ್ನಡ ಭಾಷೆಯು ರಾಜ್ಯದ ಕನ್ನಡಿಗರ ಅಸ್ತಿತ್ವವಾಗಿದ್ದು, ಭಾಷೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಸಮಗ್ರ ಕನ್ನಡಿಗರು ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಸಲ್ಲಿಸಲು ಕಂಕಣ ಬದ್ಧರಾಗಬೇಕು’ ಎಂದು  ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಬಿ.ಎ. ಕೆಂಚರಡ್ಡಿ ಹೇಳಿದರು. ವಿಶ್ವ ಕನ್ನಡ ಸಮ್ಮೇಳನ ನಿಮಿತ್ತ ಗದಗ ಜಿಲ್ಲೆಯಲ್ಲಿ ಸಂಚಾರ ಕೈಕೊಂಡಿರುವ ಕನ್ನಡ ನುಡಿ ತೇರಿಗೆ ಬುಧವಾರ ಪಟ್ಟಣದಲ್ಲಿ ಸ್ವಾಗತ ಕೋರಿ, ನರಗುಂದಕ್ಕೆ ತೆರಳುವ ಸಂದರ್ಭದಲ್ಲಿ ಪಟ್ಟಣದ ನಾಗರಿಕರ ವತಿಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಅವರು ಮಾತನಾಡಿದರು.

ರೋಣ ತಹಸೀಲ್ದಾರ ಜಿ.ಎಚ್. ನಾಗಹನಮಯ್ಯ ಮಾತನಾಡಿ, ‘ಎರಡು ಸಾವಿರ ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆಯಲು ಅರ್ಹವಾಗಿದೆ. ಭಾಷೆಯನ್ನು ಉಳಿಸಿ ಬೆಳಸುವ ಜವಾಬ್ದಾರಿ ಸಮಸ್ತ ಕನ್ನಡಿಗರದ್ದು. ಕೇವಲ ಉಪನ್ಯಾಸ, ಗೋಷ್ಠಿ, ಭಾಷಣಗಳಿಂದ ಕನ್ನಡ ಭಾಷೆ ಅಭಿವೃದ್ಧಿ ಆಗದು. ಜನರು ಕನ್ನಡ ಎಂಬುದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವೆಂದು ಪರಿಗಣಿಸಿದಾಗ ಮಾತ್ರ ಭಾಷೆ ಬೆಳವಣಿಗೆಯಾಗಲು ಸಾಧ್ಯ’ ಎಂದರು.

ಕನ್ನಡ ನುಡಿ ತೇರು ಆಗಮಿಸಿದ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಪಾಟೀಲ, ತಾ.ಪಂ. ಅಧ್ಯಕ್ಷ ಶಿವಕುಮಾರ ಸಾಲಮನಿ, ಪುರಸಭೆಯ ಅಧ್ಯಕ್ಷೆ ಸುಮಂಗಲಾ ಪಾಟೀಲ, ಉಪಾಧ್ಯಕ್ಷ ಯೂಸುಫ್ ಇಟಗಿ, ತಾ.ಪಂ. ಸದಸ್ಯರು, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಆನಂದ ಇನಾಮದಾರ,  ಗುರುರಾಜ ಕುಲಕರ್ಣಿ, ಅಶೋಕ ನವಲಗುಂದ, ವಾಯ್.ವಿ.ಪಲ್ಲೇದ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಗುಡ್ಲಾನೂರ, ಎಂ.ಬಿ. ಜುಗಣೇಕರ, ವಿ.ಕೆ. ಕಾಳಪ್ಪನವರ, ಎಂ.ಎಸ್. ರೇವಣ್ಣವರ, ಸದಾಶಿವಪೇಟಿಮಠ, ಸಿ.ಡಿ.ಹಾದಿಕರ, ಅಧಿಕಾರಿ ವರ್ಗ, ಶಾಲಾ ಕಾಲೇಜ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.