ADVERTISEMENT

ಕಸದ ರಾಶಿಗೆ ಕೆಂಗಟ್ಟ ಜವುಳಗಲ್ಲಿ ನಿವಾಸಿಗಳು

ದೊಡ್ಡ ಚರಂಡಿ ಕಾಮಗಾರಿ ಸ್ಥಗಿತ: ಮಳೆಯಾದ ಬೆನ್ನಲ್ಲೇ ತ್ಯಾಜ್ಯದ ದುರ್ವಾಸನೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 13:03 IST
Last Updated 26 ಮೇ 2018, 13:03 IST
ಧಾರಾಕಾರ ಮಳೆಯಾದ ಬೆನ್ನಲ್ಲೇ ದೊಡ್ಡ ಚರಂಡಿ ಮೂಲಕ ನಗರದ ಕಸದ ರಾಶಿ ಹರಿದುಬಂದು ಜವುಳಗಲ್ಲಿಯಲ್ಲಿ ಸಂಗ್ರಹವಾಗಿರುವುದು
ಧಾರಾಕಾರ ಮಳೆಯಾದ ಬೆನ್ನಲ್ಲೇ ದೊಡ್ಡ ಚರಂಡಿ ಮೂಲಕ ನಗರದ ಕಸದ ರಾಶಿ ಹರಿದುಬಂದು ಜವುಳಗಲ್ಲಿಯಲ್ಲಿ ಸಂಗ್ರಹವಾಗಿರುವುದು   

ಗದಗ: ನಗರದ ಹೃದಯ ಭಾಗದಲ್ಲಿರುವ ಜವುಳಗಲ್ಲಿ, ಇಲ್ಲಿ ಹರಿಯುವ ದೊಡ್ಡ ಚರಂಡಿ ಮೂಲಕ ಕುಖ್ಯಾತಿ ಪಡೆದಿದೆ. ನಗರದ ನಗರದ ಬಹುತೇಕ ಪ್ರದೇಶಗಳ ತ್ಯಾಜ್ಯದ ನೀರು ಈ ಚರಂಡಿ ಮೂಲಕವೂ ಪ್ರವಾಹದ ರೂಪದಲ್ಲಿ ಹರಿದು ನಗರದ ಹೊರವಲಯಕ್ಕೆ ಹೋಗುತ್ತದೆ.

ಕಳೆದೊಂದು ವಾರದಿಂದ ನಗರದಾದ್ಯಂತ ಮಳೆಯಾಗುತ್ತಿದ್ದು, ಜವುಳಗಲ್ಲಿಯ ಚರಂಡಿ ನೀರಿ ಉಕ್ಕಿ ರಸ್ತೆಗೆ ಹರಿದಿದೆ. ಚರಂಡಿ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು, ತ್ಯಾಜ್ಯದ ನೀರು ಎಲ್ಲಿ ಬೇಕೆಂದರಲ್ಲಿ ಹರಿದು ಗಬ್ಬುನಾರುತ್ತಿದೆ. ಈ ಪ್ರದೇಶದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಧಾರಾಕಾರ ಮಳೆಯಾದರೆ ಚರಂಡಿ ನೀರು ನೇರವಾಗಿ ಮನೆಯೊಳಗೆ ನುಗ್ಗುತ್ತದೆ.

ಇತ್ತೀಚೆಗೆ ಸುರಿದ ಮಳೆಯಿಂದ ನಗರದ ದಕ್ಷಿಣ ಭಾಗದಿಂದ ಹರಿದು ಬಂದ ಕಸದ ರಾಶಿಯೆಲ್ಲಾ ಜವುಳ ಗಲ್ಲಿಯಲ್ಲಿ ಸಂಗ್ರಹವಾಗಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ನಗರದ ಮಾರುಕಟ್ಟೆ ಸ್ತೆಗೆ ಹೊಂದಿಕೊಂಡಿರುವ ಈ ಗಲ್ಲಿಯ ನಿವಾಸಿಗಳು ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕ ಶೌಚಗೃಹ ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಶಹಪುರ ಪೇಟೆ, ಬಸವೇಶ್ವರ ನಗರ ಭಾಗದ ಸಾರ್ವಜನಿಕರು ಜವುಳಗಲ್ಲಿಯ ಮೂಲಕ ನಗರದ ಐತಿಹಾಸಿಕ ಪ್ರಸಿದ್ಧ ವೀರನಾರಾಯಣ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆದರೆ, ಸ್ವಚ್ಛತೆ ಕೊರತೆ, ತ್ಯಾಜ್ಯದ ರಾಶಿ ಹಾಗೂ ಬೀದಿ ನಾಯಿಗಳ ಹಾವಳಿಯಿಂದ ಈ ರಸ್ತೆಯಲ್ಲಿ ಸಂಚರಿಸುವುದನ್ನೇ ನಿಲ್ಲಿಸಿದ್ದಾರೆ.

‘ಆಜಾದ್ ರಸ್ತೆ ಬದಿಯ ಮಾಂಸದಂಗಡಿಗಳ ಮಾಲೀಕರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಸಿಸಿ ರಸ್ತೆಯನ್ನಾಗಿ ಪರಿವರ್ತಿಸಬೇಕು. ದೊಡ್ಡ ಗಟಾರಿನ ಮೇಲೆ ಸ್ಲ್ಯಾಬ್‌ ಹಾಕಿ ವಾಹನ ನಿಲುಗಡೆ ಅವಕಾಶ ಕಲ್ಪಿಸಬೇಕು. ಅಂದಾಗ ಮಾತ್ರ ಈ ನರಕಯಾತನೆಗೆ ಶಾಶ್ವತ ಪರಿಹಾರ ಸಾಧ್ಯ’ ಎನ್ನುತ್ತಾರೆ ಇಲ್ಲಿನ ನಿವಾಸಿ ಬಾಬಾಜಾನ್ ಬಳಗಾನೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.