ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 6:51 IST
Last Updated 21 ಸೆಪ್ಟೆಂಬರ್ 2013, 6:51 IST

ರೋಣ :  ತಾಲ್ಲೂಕು ಪಂಚಾಯ್ತಿ ಸದಸ್ಯ ಎಲ್.ಬಿ. ಜಂಗಣ್ಣವರ ನಿಧನದಿಂದ ತೆರವಾಗಿದ್ದ ಹೊಳೆ ಆಲೂರ ಬ್ಲಾಕ್ ಹುನಗುಂಡಿ ತಾಲ್ಲೂಕು ಪಂಚಾಯ್ತಿ  ಕ್ಷೇತ್ರದ ಉಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದರಿಂದ ಕಾಂಗ್ರೆಸ್‌ನ ಬಸನಗೌಡ ಲಕ್ಷ್ಮಣಗೌಡ ಶಿರಗುಂಪಿ ಅವಿರೋಧವಾಗಿ ಆಯ್ಕೆಯಾದರು.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಒಟ್ಟು ಮೂರು ನಾಮಪತ್ರಗಳು ಸಲ್ಲಿಕೆಯಾಗಿದ್ದವು.  ಬಿಜೆಪಿಯಿಂದ ಗಂಗಾಧರ ಶಂಕ್ರಪ್ಪ ಮಂಡಸೊಪ್ಪಿ, ಪಕ್ಷೇತರ ಅಭ್ಯರ್ಥಿಯಾಗಿ ಬಸಪ್ಪ ಬಾಳಪ್ಪ ಮೇಟಿ  ಶುಕ್ರವಾರ ಮಧ್ಯಾಹ್ನ 1-.30 ಕ್ಕೆ ನಾಮಪತ್ರ ಹಿಂಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಲಕ್ಷ್ಮಣಗೌಡ ಶಿರಗುಂಪಿ ಅವಿರೋಧ ಆಯ್ಕೆಯಾಗುವ ಮೂಲಕ ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ತೀವ್ರ ಮುಖಭಂಗವಾದಂತಾಗಿದೆ.

ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮ­ಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಗಂಗಾಧರ ಮಂಡಸೊಪ್ಪಿ ನಾಮಪತ್ರ ವಾಪಸ್ ಪಡೆ­ದಿರುವುದು ಹಲವಾರು ಸಂಶಯಗಳಿಗೆ ಎಡೆಮಾಕೊಟ್ಟಿದೆ.  ಸೆ 29 ನಡೆಯುವ ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಸೆಪ್ಟೆಂಬರ್‌ 21 ಕೊನೆಯ ದಿನವಾಗಿತ್ತು,

ಹೊಳೆ ಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಮಾತನಾಡಿ, ‘ರಾಜ್ಯ ಅಭಿವೃದ್ಧಿ ದಿಕ್ಕಿನಲ್ಲಿ ಸಾಗಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಬೇಕು’ಎಂದರು. ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಐ.ಎಸ್. ಪಾಟೀಲ ಮಾತನಾಡಿ, ‘ಬಿಜೆಪಿಯ  ದುರಾಡಳಿತದಿಂದ ಬೇಸತ್ತ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಬಲದ ಅಧಿಕಾರವನ್ನು ನೀಡುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡಿದ್ದಾರೆ. ಇಂದು ತಾಲೂಕಿನಲ್ಲಿಯೂ ಪಕ್ಷದ ಅಭ್ಯರ್ಥಿ ಅವಿರೋಧವಾಗಿ ಸಂತಸದ ವಿಷಯ’ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಪರಶುರಾಮಪ್ಪ ಅಳಗವಾಡಿ, ಡಾ ಶಶಿಧರ ಹಟ್ಟಿ, ಎಮ್. ಬಿ. ಕೊಳೇರಿ, ಕುಬೇರಪ್ಪ ಸಾಸ್ವಿಹಾಳ, ನಿಂಗಪ್ಪ ಹೊಸಮನಿ, ಶಿವಪುತ್ರಪ್ಪ ಸೂಳಿಕೇರಿ, ಬಸನಗೌಡ ಬದಾಮಿ, ಸಿ.ಬಿ. ಪಾಟೀಲ, ಎಸ್.ಎಚ್. ಪಾಟೀಲ ಸೇರಿದಂತೆ ಅಪಾರ ಬೆಂಬಲಿಗರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.