ADVERTISEMENT

‘ಕಾಂಗ್ರೆಸ್ ಬಿಜೆಪಿ ಒಂದೇ ನಾಣ್ಯದ ಎರಡು ಮುಖ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 8:27 IST
Last Updated 10 ಏಪ್ರಿಲ್ 2018, 8:27 IST

ನರೇಗಲ್: ರೋಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಒಳಒಪ್ಪಂದ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಯನ್ನು ಕುಂಠಿತಗೊಳಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ‘ನಮ್ಮ ಕಾಂಗ್ರೆಸ್’ ಅಭ್ಯರ್ಥಿ ಎಚ್.ಎಸ್.ಸೊಂಪೂರ ಆರೋಪಿಸಿದರು. ಪಟ್ಟಣದ ‘ನಮ್ಮ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಶಾಸಕ ಜಿ.ಎಸ್.ಪಾಟೀಲ ಆಡಳಿತದಲ್ಲಿ ಇದ್ದಾಗ ಬಿಜೆಪಿಯ ಕಳಕಪ್ಪ ಬಂಡಿಯವರು ಶಾಸಕರ ತಪ್ಪುಗಳ ವಿರುದ್ಧ ಯಾವುದೇ ತರಹದ ಹೋರಾಟವನ್ನು ಮಾಡಿಲ್ಲ. ಅದೇ ತರಹ ಬಂಡಿಯವರು ಮಂತ್ರಿಯಾಗಿದ್ದಾಗ ಜಿ.ಎಸ್.ಪಾಟೀಲರು ನಡೆದುಕೊಂಡು ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸಿದ್ದರು. ಈ ಬಾರಿಯ ರೋಣ ಮತಕ್ಷೇತ್ರದ ಚುನಾವಣೆಯು ‘ನಮ್ಮ ಕಾಂಗ್ರೆಸ್’ ಹಾಗೂ ಬಿಜೆಪಿ ನಡುವಿನ ನೇರ ಸಮರವಾಗಿದ್ದು ಕಾಂಗ್ರೆಸ್‌ನ ಶಾಸಕರು ಮೂರನೆ ಸ್ಥಾನದಲ್ಲಿರುತ್ತಾರೆ ಎಂದು ಭವಿಷ್ಯ ನುಡಿದರು.

ಬಸವರಾಜ ಹೊರಟ್ಟಿಯವರು ಇರುವರೆಗೂ ಜೆಡಿಎಸ್‌ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗುವುದಿಲ್ಲ. ಹೊರಟ್ಟಿ ಕಾಂಗ್ರೆಸ್‌ನರೊಂದಿಗೆ ಸೂಟ್ ಕೇಸ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

‘ನನಗೆ ಜಕ್ಕಲಿಯ ದೊಡ್ಡಮೇಟಿ ಕುಟುಂಬದ ಮೇಲೆ ಹಾಗೂ ರಾಜ್ಯಕ್ಕೆ ಅವರ ಕೊಡುಗೆಯ ಬಗ್ಗೆ ಅಪಾರ ಗೌರವವಿದೆ. ಆದರೆ ರವೀಂದ್ರನಾಥ ದೊಡ್ಡಮೇಟಿಯವರ ಒಳ್ಳೆಯತನ ರಾಜಕಾರಣದಲ್ಲಿ ನಡೆಯುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಮತಗಳನ್ನು ಅವರು ಪಡೆದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದರು.

ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ಹಲವಾರು ಯುವಕರು ‘ನಮ್ಮ ಕಾಂಗ್ರೆಸ್’ ಸೇರ್ಪಡೆಯಾದರು. ಶ್ರೀಪ್ರಸಾದ ಸತ್ಯಣ್ಣವರ, ಸಂಜಯಕುಮಾರ ಜೋಶಿ, ಸಂಗಪ್ಪ ಎಲಿಗಾರ, ರಾಜು ಸಾಂಗ್ಲಿಕರ, ಮಲ್ಲಪ್ಪ ಗುರಿಕಾರ ಇದ್ದರು,

**

ಶಾಸಕನಾಗಿ ಮಾಡುತ್ತೇನೆ ಎಂದು ಪ್ರಮಾಣ ಮಾಡಿದ್ದ ಕುಮಾರಸ್ವಾಮಿಯವರು ಈಗ ದೊಡ್ಡಮೇಟಿಯವರಿಗೆ ಟಿಕೆಟ್ ನೀಡಿ ಮತ್ತೆ ವಚನ ಭ್ರಷ್ಟ ಆಗಿದ್ದಾರೆ – ಎಚ್‌.ಎಸ್‌. ಸೋಂಪೂರ.ನಮ್ಮ ಕಾಂಗ್ರೆಸ್‌ ಅಭ್ಯರ್ಥಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.