ADVERTISEMENT

ಕುಡಿಯುವ ನೀರಿಗಾಗಿ ಪ್ರಾಣಿಗಳ ಹರಸಾಹಸ‌

ತೀವ್ರಗೊಂಡ ಬಿಸಿಲಿನ ಝಳ

​ಪ್ರಜಾವಾಣಿ ವಾರ್ತೆ
Published 4 ಮೇ 2018, 9:38 IST
Last Updated 4 ಮೇ 2018, 9:38 IST
ನರೇಗಲ್ ಪಟ್ಟಣದಲ್ಲಿ ನೀರಿನ ಬವಣೆ ನೀಗಿಸಿಕೊಳ್ಳಲು ಹರ ಸಾಹಸ ಪಡುತ್ತಿರುವ ಕೋತಿಗಳು
ನರೇಗಲ್ ಪಟ್ಟಣದಲ್ಲಿ ನೀರಿನ ಬವಣೆ ನೀಗಿಸಿಕೊಳ್ಳಲು ಹರ ಸಾಹಸ ಪಡುತ್ತಿರುವ ಕೋತಿಗಳು   

ನರೇಗಲ್: ಹೋಬಳಿಯಾದ್ಯಂತ ಬಿಸಿಲಿನ ಝಳ ತೀವ್ರಗೊಂಡಿದೆ. ಪ್ರಾಣಿಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ಬಯಲು ಸೀಮೆ ಆಗಿರುವುದರಿಂದ ಸಾವಿರಾರು ಅಡಿಗಳಷ್ಟು ಆಳಕ್ಕೆ ಬೋರ್‌ವೆಲ್ ಕೊರೆದರೂ ‘ಗಂಗೆ’ ಸಿಗುತ್ತಿಲ್ಲ. ಕಳೆದ ಬಾರಿ ಹಿಂಗಾರು ಮಳೆಯ ಪ್ರಮಾಣ ಅಷ್ಟಕ್ಕಷ್ಟೆ ಆಗಿದೆ. ಇದರಿಂದ ತಾಲ್ಲೂಕಿನಾದ್ಯಂತ ಜನತೆ ಈ ಬೇಸಿಗೆಯಲ್ಲಿ ನೀರಿನ ಬವಣೆಯನ್ನು ಅನುಭವಿಸಬೇಕಾಗುತ್ತದೆ. ಈ ಸ್ಥಿತಿ ಪ್ರಾಣಿ ಪಕ್ಷಿಗಳಿಗೂ ಹೊರತಾಗಿಲ್ಲ.

ಪಕ್ಷಿ, ಪ್ರಾಣಿಗಳಿಗೂ ಮನುಷ್ಯರಂತೆ ದಿನಕ್ಕಿಷ್ಟು ಪ್ರಮಾಣದ ನೀರು ಬೇಕಾಗುತ್ತದೆ. ನೀರನ್ನರಸಿ ಸಾವಿರಾರು ಕಿ.ಮೀ. ಗಟ್ಟಲೆ ಪ್ರಯಾಣ ಬೆಳೆಸುತ್ತವೆ. ಈ ವೇಳೆ ನೀರು ದೊರೆಯದೆ ಹಲವು ಪಕ್ಷಿ, ಪ್ರಾಣಿಗಳು ಮೃತಪಡುತ್ತವೆ. ಇಂದು ಗುಬ್ಬಚ್ಚಿ, ಕಾಗೆ ಸೇರಿದಂತೆ ಇನ್ನಿತರ ಜೀವಿಗಳು ವಿನಾಶದ ಅಂಚಿಗೆ ತಲುಪುವ ಸ್ಥಿತಿ ಉಂಟಾಗಿದೆ ಜೀವಜಲಕ್ಕಾಗಿ ಪರಿತಪಿಸುತ್ತಿರುವ ಪ್ರಾಣಿ, ಪಕ್ಷಿಗಳ ರೋದನದ ದೃಶ್ಯ ಎಂತಹವರ ಮನಸ್ಸನ್ನು ಕಲುಕವಂತೆ ಮಾಡುತ್ತದೆ ಎಂದು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಡಿ.ಎಚ್.ಫರಂಗಿ ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ಕೆರೆ, ಚೆಕ್‌ಡ್ಯಾಂ ಹಾಗೂ ಹೊಂಡಗಳನ್ನು ನಿರ್ಮಿಸುವ ಕಾರ್ಯ ಹೆಚ್ಚಾಗಿದೆ. ಮಳೆಗಾಲದಲ್ಲಿ ಬರುವ ನೀರು ವನ್ಯಜೀವಿಗಳಿಗೆ ಸಹಾಯಕವಾಗಿದೆ. ಆದರೂ ಬೇಸಿಗೆಯ ತೀವ್ರತೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಅಡವಿಯಲ್ಲಿ ನೀರಿನ ಸಮಸ್ಯೆಯಾಗುತ್ತಿದ್ದಂತೆ ವನ್ಯಜೀವಿಗಳು ಊರಿನತ್ತ ಹೆಜ್ಜೆ ಹಾಕುತ್ತವೆ. ಅಷ್ಟೇ ಅಲ್ಲದೇ ಕೋತಿ, ಮಂಗ, ನಾಯಿ, ಜಾನುವಾರುಗಳು ಕುಡಿಯುವ ನೀರಿಗಾಗಿ ಹರಸಾಹಸ ಪಡುತ್ತಿವೆ. ಪಟ್ಟಣಗಳಲ್ಲಿ ಮನೆಯ ಹೊರಗಡೆ ಇಡಲಾದ ಬ್ಯಾರಲ್, ಬಕೆಟ್ ಹಾಗೂ ನಲ್ಲಿ ನೀರಿನಲ್ಲಿ ನೀರು ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತಿವೆ.

ADVERTISEMENT

ಸಾಮಾಜಿಕ ಜಾಲತಾಣಗಳ ಅಭಿಯಾನ: ಪ್ರಾಣಿಗಳು, ಪಕ್ಷಿಗಳಿಗೆ ನೀರು ಒದಗಿಸಿ ಎಂದು ಕೇವಲ ಸಾಮಾಜಿಕ ತಾಣಗಳಲ್ಲಿ ಚಿತ್ರಗಳನ್ನು ಹಾಕಿ ಅಭಿಯಾನ ನಡೆಸದೇ ಕುಡಿಯಲು ನೀರು ಒದಗಿಸುವ ಕಾರ್ಯ ಮಾಡಬೇಕಿದೆ.

**
ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಉಳಿಸುವಂತಹ ಕೆಲಸ ಮಾಡಬೇಕಾಗಿದೆ. ಇನ್ನಾದರೂ ಇಂತಹ ಕೆಲಸಕ್ಕೆ ಮುಂದಾಗಬೇಕು
– ಸಂಗಮೇಶ ಬಾಗೂರ, ಗ್ರೀನ್ ಆರ್ಮಿ ತಂಡದ ಸದಸ್ಯ

**

ಚಂದ್ರು ಎಂ. ರಾಥೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.