ADVERTISEMENT

ಕೈಬೀಸಿ ಕರೆಯುತ್ತಿದೆ ಪಾರ್ವತಿಕೊಳ್ಳ

ಬಸವರಾಜ ಪಟ್ಟಣಶೆಟ್ಟಿ
Published 15 ಅಕ್ಟೋಬರ್ 2017, 7:08 IST
Last Updated 15 ಅಕ್ಟೋಬರ್ 2017, 7:08 IST
ಹಸಿರಿನಿಂದ ಕಂಗೊಳಿಸುತ್ತಿರುವ ಆನಂದಗಿರಿ
ಹಸಿರಿನಿಂದ ಕಂಗೊಳಿಸುತ್ತಿರುವ ಆನಂದಗಿರಿ   

ರೋಣ: ತಾಲ್ಲೂಕಿನ ಸರ್ಜಾಪುರ ಗ್ರಾಮದ ಆನಂದಗಿರಿ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಹಸಿರು ಮೈದುಂಬಿಕೊಂಡು ಕಂಗೊಳಿಸುತ್ತಿದೆ. ಇದರಿಂದ ಬೆಟ್ಟದತ್ತ ಮುಖ ಮಾಡಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ.

ಹಸಿರ ಸಿರಿ: ಬರದ ನಾಡು ಎಂದೇ ಹೆಸರಾಗಿರುವ ರೋಣ ತಾಲ್ಲೂಕಿನಲ್ಲಿ ನಾಲ್ಕು ವರ್ಷಗಳಿಂದ ಬರಗಾಲ ಪರಿಸ್ಥಿತಿ ಇತ್ತು. ಈಗ ಸುರಿಯುತ್ತಿರುವ ಮಳೆ ಬರದ ಬವಣೆಯನ್ನು ತಾತ್ಕಾಲಿಕವಾಗಿ ನೀಗಿದ್ದು, ಹಸಿರು ಕಾಣುವಂತಾಗಿದೆ.

ಔಷಧೀಯ ಸಸಿಗಳ ಆಗರ: ಆನಂದಗಿರಿ ಔಷಧೀಯ ಸಸಿಗಳಿಗೆ ಹೆಸರಾಗಿದೆ. ಬೆಟ್ಟದಲ್ಲಿರುವ ಪಾರ್ವತಿಕೊಳ್ಳದ ಜಲಪಾತದಲ್ಲಿ ಸ್ನಾನ ಮಾಡಿದರೆ ಎಲ್ಲ ಬಗೆಯ ಚರ್ಮರೋಗಗಳು ವಾಸಿಯಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಬೆಟ್ಟದಲ್ಲಿ ಕಣ್ಮಣ ಸೆಳೆಯುವ ಹೂವಿನ ಗಿಡ, ಬಳ್ಳಿಗಳು ಇವೆ. ಬಣ್ಣದ ಚಿಟ್ಟೆಗಳು, ಗಿಡ–ಮರಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತಿರುವ ಬಾನಾಡಿಗಳು ಬೆಟ್ಟದ ಜೀವಂತಿಕೆಯನ್ನು ಹೆಚ್ಚಿಸಿವೆ.

ADVERTISEMENT

ಆಕರ್ಷಕ ಪಾರ್ವತಿಕೊಳ್ಳ ಜಲಪಾತ: ಉತ್ತಮ ಮಳೆಯಿಂದಾಗಿ ಬೆಟ್ಟದಲ್ಲಿ ಹರಿಯುತ್ತಿದ್ದ ಪಾರ್ವತಿ ಕೊಳ್ಳದಲ್ಲಿ ಜಲಪಾತ ಸೃಷ್ಟಿಯಾಗಿದೆ. ದೊಡ್ಡ ಬಂಡೆಗಳ ನಡುವೆ ನುಸುಳಿಕೊಂಡು ಧುಮ್ಮಿಕ್ಕಿ ಹರಿಯುವ ಜಲಪಾತ ಮಾಯಾಲೋಕವನ್ನು ಸೃಷ್ಟಿಸಿದೆ.

ಬೆಟ್ಟ ತಲುಪುವುದು ಹೇಗೆ?: ಪಾರ್ವತಿಕೊಳ್ಳ ರೋಣ ತಾಲ್ಲೂಕಿನ ಸರ್ಜಾಪೂರ ಗ್ರಾಮದಿಂದ 2 ಕಿ.ಮೀ ದೂರದಲ್ಲಿದೆ. ಆನಂದಗಿರಿವರೆಗೂ ವಾಹನ ಕೊಂಡೊಯ್ಯಬಹುದು. ಪಾರ್ವತಿಕೊಳ್ಳ ಜಲಪಾತ ನೋಡಲು 1 ಕಿ.ಮೀ ಚಾರಣ ಮಾಡಬೇಕಾಗುತ್ತದೆ.

ಪಾರ್ವತಿಕೊಳ್ಳ ರೋಣದಿಂದ 23 ಕಿ.ಮೀ ದೂರವಿದ್ದು ಹಿರೇಹಾಳ ಶಾಂತಗೇರಿ ಮಾರ್ಗವಾಗಿ ಸರ್ಜಾಪುರಕ್ಕೆ ತಲುಪಬಹುದಾಗಿದೆ. ಗಜೇಂದ್ರಗಡದಿಂದ ಬೆಟ್ಟ 26 ಕಿ.ಮೀ ದೂರದಲ್ಲಿದ್ದು ಬೇವಿನಕಟ್ಟಿ ಕ್ರಾಸ್– ಮುಶಿಗೇರಿ– ರಾಜೂರು ಮಾರ್ಗವಾಗಿ ಪಾರ್ವತಿಕೊಳ್ಳ ತಲುಪಬಹುದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.