ADVERTISEMENT

ಖಾದಿ ಮೋಡಿಗೆ ಮರುಳಾದ ಜನ

ಹುಚ್ಚೇಶ್ವರ ಅಣ್ಣಿಗೇರಿ
Published 13 ಡಿಸೆಂಬರ್ 2017, 10:17 IST
Last Updated 13 ಡಿಸೆಂಬರ್ 2017, 10:17 IST
ಸರಸ್ ಮೇಳದಲ್ಲಿ ತೆರೆದಿರುವ ಖಾದಿ ಸಾಮಗ್ರಿಗಳ ಮಾರಾಟ ಮಳಿಗೆ
ಸರಸ್ ಮೇಳದಲ್ಲಿ ತೆರೆದಿರುವ ಖಾದಿ ಸಾಮಗ್ರಿಗಳ ಮಾರಾಟ ಮಳಿಗೆ   

ಗದಗ: ‘ಗದಗ ಉತ್ಸವ’ದ ಅಂಗವಾಗಿ ನಗರದ ವಿ.ಡಿ.ಎಸ್‌.ಟಿ.ಸಿ ಮೈದಾನದಲ್ಲಿ ಆಯೋಜಿಸಿರುವ ಸರಸ್‌ ಮೇಳದಲ್ಲಿ ಖಾದಿ ಮೋಡಿ ಮಾಡಿದೆ. ಖಾದಿ ಬಟ್ಟೆಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಕಳೆದ ಐದು ದಿನಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಾಪಾರ ಆಗಿದೆ. ಹೆಚ್ಚಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು, ಹಾಗೂ ಕಾಲೇಜು ವಿದ್ಯಾರ್ಥಿಗಳು ಖಾದಿ ಉಡುಪು ಖರೀದಿಸುತ್ತಿದ್ದಾರೆ. ಬೆಟಗೇರಿಯ ಕೈಮಗ್ಗದ ಸೀರೆಗಳಿಗೂ ಬೇಡಿಕೆ ಹೆಚ್ಚಿದೆ.

ಗದಗ, ಬೆಟಗೇರಿ, ಧರ್ಮಸ್ಥಳ ಸೇರಿ ಒಟ್ಟು 5 ಖಾದಿ ಮಾರಾಟ ಮಳಿಗೆಗಳು ಇಲ್ಲಿವೆ. ಕೈಮಗ್ಗ, ಚರಕದಿಂದ ನೂಲು ನೇಯ್ದು ಖಾದಿ ಉಡುಪು ತಯಾರಿಸುವ ಪ್ರಾತ್ಯಕ್ಷಿಕೆ ನೀಡುವ 3 ಮಳಿಗೆ ತೆರೆಯಲಾಗಿದೆ.

ಖಾದಿ ಮಳಿಗೆಯಲ್ಲಿ ಜಮಖಾನ ಕರವಸ್ತ್ರ, ಅಂಗಿ, ಜುಬ್ಬಾ, ತಲೆದಿಂಬಿನ ಹೊದಿಕೆ, ನೆಲಹಾಸು ಹೆಚ್ಚು ಮಾರಾಟವಾಗುತ್ತಿವೆ. ನಿತ್ಯ 15ರಿಂದ 20 ಸಾವಿರ ಜನರು ಭೇಟಿ ಕೊಡುತ್ತಾರೆ. ದಿನಕ್ಕೆ ಮಳಿಗೆಯೊಂದರಲ್ಲಿ ₹ 15 ರಿಂದ ₹ 25 ಸಾವಿರವರೆಗೆ ವ್ಯಾಪಾರವಾಗುತ್ತದೆ’ ಎಂದು ಖಾದಿ ಗ್ರಾಮೋದ್ಯೋಗ ಸಂಘದ ಮಾರಾಟ ಮಳಿಗೆಯ ಸಿಬ್ಬಂದಿ ನವೀನ ಯಚ್ಚಲಗಾರ ಹೇಳಿದರು.

ADVERTISEMENT

‘ದಿನ ನಿತ್ಯದ ಬಳಕೆಗಾಗಿ ಖಾದಿ ಉಡುಪುಗಳನ್ನು ಧರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಕಲಿ ಖಾದಿ ಉಡುಪುಗಳಿಗೆ ಕಡಿವಾಣ ಹಾಕಬೇಕು. ವರ್ಷದಲ್ಲಿ ಒಮ್ಮೆಯಾದರೂ ಇಂತಹ ಮೇಳ ಆಯೋಜಿಸಬೇಕು’ ಎಂದು ಅವರು ಅಭಿಪ್ರಾಯಟ್ಟರು.

‘ಇಲ್ಲಿನ ಖಾದಿ ಮಳಿಗೆಯೊಂದರಲ್ಲಿ ಕೈಮಗ್ಗದಿಂದ ತಯಾರಿಸಿದ ಬೆಟಗೇರಿ ಸೀರೆಯನ್ನು ₹ 5,500 ನೀಡಿ ಖರೀದಿಸಿದ್ದೇನೆ’ ಎಂದು ನಗರದ ನಿವಾಸಿ ಲಕ್ಷ್ಮೀ ಎನ್. ತೇರದಾಳ ಹೇಳಿದರು.

ಸರಸ್ ಮೇಳ ಡಿ. 14ರವರೆಗೆ ನಡೆಯಲಿದೆ. ಒಟ್ಟು 200 ಮಳಿಗೆಗಳನ್ನು ತೆರೆಯಲಾಗಿದೆ. ಖಾದಿ ಮಾತ್ರವಲ್ಲ ಆಹಾರ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಿರಿಧಾನ್ಯ ಹೀಗೆ ನೂರಾರು ವಸ್ತುಗಳ ಪ್ರದರ್ಶನ, ಮಾರಾಟ ನಡೆಯುತ್ತಿದೆ. ಸ್ವ–ಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಸಂಘಗಳು ತಯಾರಿಸಿದ ವಸ್ತುಗಳಿಗೆ ವೇದಿಕೆ ಲಭಿಸಿದೆ. ಪುಸ್ತಕಗಳ ಪ್ರದರ್ಶನವೂ ನಡೆಯುತ್ತಿದೆ. ಚನ್ನಪಟ್ಟಣದ ಮರದ ಗೊಂಬೆಗಳ ಮಾರಾಟ ಮಳಿಗೆ ಪ್ರಮುಖ ಆಕರ್ಷಣೆ. ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನ ವ್ಯಾಪಾರಿಗಳು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.