ADVERTISEMENT

ಗಣೇಶೋತ್ಸವ: ಸಾರ್ವಜನಿಕರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:15 IST
Last Updated 7 ಸೆಪ್ಟೆಂಬರ್ 2013, 6:15 IST

ಗದಗ: ಸಾರ್ವಜನಿಕ ರಸ್ತೆ ಹಾಗೂ ವಾಹನ ಓಡಾಡುವ ಸ್ಥಳದಲ್ಲಿ ಮಂಟಪ, ಶಾಮಿಯಾನ ಹಾಕಬಾರದು ಹಾಗೂ ಗಣೇಶ ಮಂಟಪಗಳಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಗಣೇಶ ಮೂರ್ತಿ ಪೆಂಡಾಲ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಹೆಸ್ಕಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅಶ್ಲೀಲ ಚಿತ್ರಗೀತೆಗಳು, ಕೋಮುಭಾವನೆ ಕೆರಳಿಸುವಂತಹ ಹಾಡು, ಸಂಭಾಷಣೆ ಹಾಕಬಾರದು. ನಗರಸಭೆ, ಪುರಸಭೆ, ಪೊಲೀಸ್, ಹೆಸ್ಕಾಂ, ಅಗ್ನಿಶಾಮಕ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು.

ಧ್ವನಿವರ್ಧಕ ಬಳಕೆಗೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ನಿರ್ದಿಷ್ಟ ಪಡಿಸಿದ ಅವಧಿ ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಸಿಡಿಮದ್ದು, ಪಟಾಕಿ ಮುಂತಾದವುಗಳನ್ನು ಸಿಡಿಸುವಾಗ ನಾಗರಿಕರಿಗೆ ತೊಂದರೆಯಾಗಬಾರದು.

 ಮೆರವಣಿಗೆ ವೇಳೆ ಅನ್ಯಧರ್ಮಿಯರಿಗೆ ನೋವು ಉಂಟಾಗದಂತೆ ಪ್ರಚೋದನಕಾರಿ ಘೋಷಣೆ ಕೂಗಬಾರದು. ಗಣೇಶ ಉತ್ಸವ ಸಮಿತಿ ಸದಸ್ಯರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಗಣೇಶ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆ ದಿನದವರೆಗೆ ಗಣೇಶ ಪೆಂಡಾಲಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಗಣೇಶೋತ್ಸವದ ಹೆಸರಿನಲ್ಲಿ ಬಲವಂತವಾಗಿ ಚಂದಾ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದೆ.

ಪೆಂಡಾಲ್‌ಗಳಲ್ಲಿ ಬೆಂಕಿ ಅನಾಹುತಗಳ ಬಗ್ಗೆ ಅಗ್ನಿಶಾಮಕ ಉಪಕರಣಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಮುಂಚಿತವಾಗಿ ವಾಹನಗಳ (ಟ್ರ್ಯಾಕ್ಟರ್, ಟಂ ಟಂ, ಇತರೆ ವಾಹನಗಳು) ಸುರಕ್ಷತೆಗೆ ಆದ್ಯತೆ ನೀಡಬೇಕು. ಗಣಪತಿ ವಿಸರ್ಜನೆ ಕಾರ್ಯಕ್ರಮ ರಾತ್ರಿ 12 ಗಂಟೆಯೊಳಗಾಗಿ ಕಡ್ಡಾಯವಾಗಿ ಮುಕ್ತಾಯಮಾಡಬೇಕು ಎಂದು ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.