ADVERTISEMENT

ಗದಗ–ಹರಿಹರ ರೈಲು ಮಾರ್ಗ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:13 IST
Last Updated 17 ಡಿಸೆಂಬರ್ 2013, 6:13 IST

ಮುಂಡರಗಿ: ಗದಗದಿಂದ ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ನೂತನ ರೈಲು ಮಾರ್ಗ ಮಂಜೂರು ಮಾಡ ಬೇಕು ಎಂದು ಆಗ್ರಹಿಸಿ 2009ರಿಂದ ತಾಲ್ಲೂಕಿನ ವಿವಿಧ ಸಂಘಟನೆಗಳು ಕೈಗೊಂಡಿರುವ ಹೋರಾಟ ಮತ್ತು ಪತ್ರವ್ಯವಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಈವರೆಗೂ ಬರೆದಿದ್ದ ಕಾಗದ ಪತ್ರಗಳ ಶವಯಾತ್ರೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಮುಂಜಾನೆ 11ಗಂಟೆಗೆ ಪಟ್ಟಣದ ಸರ್‌ ಸಿದ್ದಪ್ಪ ಕಂಬಳಿ ವೃತ್ತದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಾಜಾ ಭಜಂತ್ರಿ ಗಳೊಂದಿಗೆ ಕಾಗದ ಪತ್ರಗಳ ಶವ ಯಾತ್ರೆ ಮಾಡಿದ ಕಾರ್ಯಕರ್ತರು, ನಂತರ ತಹಶೀಲ್ದಾರ್ ಕಚೇರಿಯ ಮುಂದೆ ಕಾಗದ ಪತ್ರಗಳ ಶವ ಪೆಟ್ಟಿಗೆಯನ್ನು ಸುಟ್ಟುಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ’ತೀರಾ ಹಿಂದುಳಿದಿರುವ ಈ ಭಾಗಗಕ್ಕೆ ನೂತನ ರೈಲು ಮಾರ್ಗ ಮಂಜೂರು ಮಾಡುವಂತೆ ಕಳೆದ ಹಲವು ವರ್ಷಗಳಿಂದ ಪ್ರಧಾನಮಂತ್ರಿ, ಕೇಂದ್ರ ರೇಲ್ವೆ ಸಚಿವರು, ರಾಜ್ಯದ ಮುಖ್ಯಮಂತ್ರಿ, ರಾಜ್ಯಪಾಲ ಮೊದ ಲಾದ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ನೂರಾರು ಪತ್ರಗಳನ್ನು ಬರೆಯ ಲಾಗಿದೆ. ಆದರೆ ಈವರಗೂ ಯಾವ ಜನಪ್ರತಿನಿಧಿಯೂ ಈ ಭಾಗದ ಜನರ ಸಮಸ್ಯೆಗಳನ್ನು ಈಡೇರಿಸಲು ಪ್ರಯತ್ನಿ ಸುತ್ತಿಲ್ಲ’ ಎಂದು ದೂರಿದರು.

‘ನೂತನ ರೈಲು ಮಾರ್ಗ ಮಂಜೂ ರಾತಿಗಾಗಿ ಒತ್ತಾಯಿಸಿ ದೆಹಲಿಯ ಜಂತರ ಮಂತರ, ಬೆಂಗಳೂರಿನ ಪ್ರೀಡಂ ಪಾರ್ಕ್,  ಜಿಲ್ಲಾಧಿಕಾರಿಗಳ ಕಾರ್ಯಾ ಲಯ, ಸ್ಥಳೀಯ ತಹಶೀಲ್ದಾರ್ ಕಚೇರಿ, ಪೋಲಿಸ್‌ ಠಾಣೆ ಹೀಗೆ ಹಲವಾರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿ ಹಾಗೂ ಕಾರ್ಯಾಲಯಗಳ ಎದುರು ಹೋರಾಟ, ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಗಳನ್ನು ಕೈಗೊಂಡಿದ್ದರೂ ಸರ್ಕಾರ ನೂತನ ರೈಲು ಮಾರ್ಗ ಮಂಜೂ ರಾತಿಗೆ ಮೀನ ಮೇಷ ಎಣಿಸುತ್ತಿದೆ’ ಎಂದು ಅವರು ಆರೋಪಿಸಿದರು.

ಚಳಿಗಾಲದ ಅಧಿವೇಶನದಲ್ಲಾದರೂ ಈ ಭಾಗಕ್ಕೆ ನೂತ ರೈಲು ಮಾರ್ಗ ಮಂಜೂರು ಮಾಡಬೇಕು. ಇಲ್ಲದಿದ್ದಲ್ಲಿ ಜನವರಿ 31ರಂದು ಈಗ ಶವ ಯಾತ್ರೆಯ ಮೂಲಕ ಸುಟ್ಟುಹಾಕ ಲಾಗಿರುವ ಕಾಗದ ಪತ್ರಗಳ ಚಿತಾಭಸ್ಮ ವನ್ನು ಯಮುನಾ ನದಿಯಲ್ಲಿ ವಿಸರ್ಜಿ ಸಲು ’ಯಮುನಾ ನದಿ ಯಾತ್ರಾ ಪ್ರತಿಭಟನೆ’ಯನ್ನು ಹಮ್ಮಿಕೊಳ್ಳ ಲಾಗುವುದು ಎಂದು ಅವರು ಎಚ್ಚರಿಸಿದರು. ನಂತರ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್‌ ಅವರಿಗೆ ಮನವಿ ಪತ್ರ ರವಾನಿಸಿದರು.

ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ, ಕೊಟ್ರಗೌಡ ಪಾಟೀಲ, ಸಹದೇವಪ್ಪ ಭಜಂತ್ರಿ, ಯಮುನಪ್ಪ ಭಜಂತ್ರಿ, ಬಿ.ಎಸ್‌.ಹೂಗಾರ, ಡಿ.ಎಸ್‌.ಪೂಜಾರ, ಶಂಕರಗೌಡ ಪಾಟೀಲ, ನಾಗಪ್ಪ ಜಾಲಪ್ಪನವರ, ಬಸಪ್ಪ ವಡ್ಡರ, ಕುರುವತ್ತೆಪ್ಪ ಅರಿಷಣದ, ವೀರಭದ್ರಪ್ಪ ಕಬ್ಬಣದ, ಮೋಹನಗೌಡ ಪಾಟೀಲ, ನಿಂಗನಗೌಡ ಪಾಟೀಲ, ಪ್ರಕಾಶ ಪೂಜಾರ, ಮಲ್ಲೇಶ ಕಕ್ಕೂರ, ಮೆಯಬೂಬಸಾಬ್ ಬಿಸನಳ್ಳಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.