ADVERTISEMENT

ಗದಗ: ಪೈಕಾ ಕ್ರೀಡಾಕೂಟಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 10:15 IST
Last Updated 19 ಅಕ್ಟೋಬರ್ 2011, 10:15 IST

ಗದಗ: ಕ್ರೀಡಾಪಟುಗಳು ಶಿಸ್ತು ಹಾಗೂ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. 

ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಮಹಿಳಾ ಪೈಕಾ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಪಾರಿತೋಷಕ ವಿತರಿಸಿ ಮಾತನಾಡಿದರು.

ದುಶ್ಚಟಗಳಿಂದ ದೂರವಿದ್ದು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪಂದ್ಯದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಭಾಗವಹಿಸಿದ ಕ್ರೀಡಾಪಟುಗಳು ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಷ್ಟ್ರ  ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಹಾರೈಸಿದರು.

ಊಟ ಹಾಗೂ ಪಾಠ ಎಷ್ಟು ಮುಖ್ಯವೋ ಆಟವೂ ಅಷ್ಟೇ ಮುಖ್ಯ. ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಆರೋಗ್ಯ ಚೆನ್ನಾಗಿರುತ್ತದೆ. ದೇಹವು ಸಮತೋಲನದಲ್ಲಿ ಇರುತ್ತದೆ. ಯುವಜನತೆ ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೆ ಕ್ರೀಡೆಯಲ್ಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಮಾತನಾಡಿ, ಮಹಿಳಾ ಪೈಕಾ ಕ್ರೀಡಾಕೂಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕ್ರೀಡಾಪಟುಗಳು ಭಾಗವಹಿಸಿಲ್ಲ ಎಂದು  ಅಸಂತೋಷ ವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ವ್ಯವಸ್ಥಿತ ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರಿಗೌಡರ,  ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ. ರುದ್ರಗೌಡ, ಜಿಲ್ಲಾ ಯೋಜನಾ ಕಾರ್ಯದರ್ಶಿ ಉಮೇಶ ಹಾಗೂ ದಿನೇಶ ಹಾಜರಿದ್ದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ಸ್ವಾಗತಿಸಿದರು. ಅಂದಾನಯ್ಯ ಹಿರೇಮಠ ನಿರೂಪಿಸಿದರು. ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.