ADVERTISEMENT

ಗದಗ: 2.18 ಲಕ್ಷ ಮಕ್ಕಳಿಗೆ `ಕ್ಷೀರಭಾಗ್ಯ'

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 9:37 IST
Last Updated 2 ಆಗಸ್ಟ್ 2013, 9:37 IST

ಗದಗ: ಸರ್ಕಾರಿ, ಅನುದಾನಿತ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಮೂರು ದಿನ ಹಾಲು ನೀಡುವ ಮಹತ್ವಾಕಾಂಕ್ಷೆಯ `ಕ್ಷೀರಭಾಗ್ಯ' ಯೋಜನೆಗೆ ಗುರುವಾರ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.

ಎಸ್.ಎಂ.ಕೃಷ್ಣ ನಗರದ ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆ ನಂ. 12ರಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತುರಮರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಜೀವ ನಾಯಕ ಅವರು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ತುರಮರಿ, ಜಿಲ್ಲೆಯ 686 ಶಾಲೆಗಳಲ್ಲಿ 1,27.944 ಮಕ್ಕಳಿಗೆ ಹಾಗೂ 1,106 ಅಂಗನವಾಡಿ ಕೇಂದ್ರಗಳ 90,719 ಮಕ್ಕಳು ಸೇರಿದಂತೆ ಒಟ್ಟು 2,18.663 ಮಕ್ಕಳು ಯೋಜನೆ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಸೋಮವಾರ, ಬುಧವಾರ ಹಾಗೂ ಶುಕ್ರವಾರ ಹಾಲು ಪೂರೈಸಲಾಗುತ್ತದೆ. ಅದಕ್ಕಾಗಿ ಪ್ರತಿ ವಿದ್ಯಾರ್ಥಿಗೆ 150 ಮಿ.ಲೀ. ಹಾಲು ತಯಾರಿಕೆಗೆ ಬೇಕಾಗಿರುವ  ತಿಂಗಳಿಗೆ ಆರು ಟನ್ ಕೆನೆಭರಿತ ಹಾಲಿನ ಪುಡಿ ಹಾಗೂ ಅಂಗನವಾಡಿಯ ಪ್ರತಿ ಮಗುವಿಗೆ  15 ಗ್ರಾಂ ನಂತೆ 16,328 ಕೆ.ಜಿ. ಕೆನೆರಹಿತ ಹಾಲಿನ ಪುಡಿಯನ್ನು ಕೆಎಂಎಫ್ ಪೂರೈಸಲಿದೆ ಎಂದರು ಹೇಳಿದರು.

ರಕ್ತಹೀನತೆ, ಅಪೌಷ್ಟಿಕತೆ ನಿವಾರಿಸಲು ಮಕ್ಕಳಿಗೆ ಸರ್ಕಾರ ಹಾಲು ನೀಡುತ್ತಿದೆ. ಹಾಲು ಕುಡಿದ ಮಕ್ಕಳು ದೈಹಿಕವಾಗಿ ಶಕ್ತಿಯುತವಾಗಿರುತ್ತಾರೆ. ಬಿಹಾರದ ಬಿಸಿಯೂಟ ಪ್ರಕರಣ ಪ್ರಸ್ತಾಪಿಸಿದ ಅವರು, ಶಾಲೆ ಮತ್ತು ವಸತಿ ನಿಲಯಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದು ಮತ್ತು ಶುಚಿತ್ವ ಕಾಪಾಡುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಅವರು ವಸತಿ ನಿಲಯ ಮೇಲ್ವಿಚಾರಕರಿಗೆ ಮತ್ತು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಮಂಜಾಗ್ರತ ಕ್ರಮ: ಹಾಲಿನ ಪುಡಿಯನ್ನು ಪ್ಯಾಕ್ ಮಾಡಿದ ದಿನಾಂಕದಿಂದ ಮೂರು ತಿಂಗಳೊಳಗೆ ಹಾಗೂ ಹಾಲಿನ ಪುಡಿ ಪ್ಯಾಕ್ ತೆರೆದ ದಿನಾಂಕದಿಂದ ಒಂದು ತಿಂಗಳೊಳಗೆ ಉಪಯೋಗಿಸಬೇಕು. ತೆರೆದ ಪ್ಯಾಕ್ ಅನ್ನು ಒಂದು ತಿಂಗಳ ನಂತರ ಬಳಸಬಾರದು. ಗಾಳಿ ಹೋಗದ, ತೇವಾಂಶವಿಲ್ಲದ, ಸ್ವಚ್ಚವಾದ ಡಬ್ಬಿಗೆ ಹಾಕಿ ತೇವವಿಲ್ಲದ ಸ್ಥಳದಲ್ಲಿ ಇಡಬೇಕು, ಇಲ್ಲವಾದಲ್ಲಿ ಹಾಲಿನ ಪುಡಿ ಫಂಗಸ್ ಆಗುವ ಸಾಧ್ಯತೆ ಇದೆ. ಹಾಲಿನ ಪುಡಿಯನ್ನು ಡಬ್ಬಿಯಿಂದ ತೆಗೆದುಕೊಳ್ಳುವಾಗ ಒಣಗಿದ ಚಮಚ ಉಪಯೋಗಿಸಬೇಕು.

ಕೆನೆಸಹಿತ ಹಾಲಿನ ಪುಡಿಯ ಮಿಶ್ರಣಕ್ಕೆ ಶುದ್ಧ ನೀರು ಬಳಸಬೇಕು, ಹಾಲಿನ ಮಿಶ್ರಣವನ್ನು ಶುದ್ಧವಾದ ಬಟ್ಟೆ ಅಥವಾ ಫಿಲ್ಟರ್‌ನಿಂದ ಶೋಧಿಸಿ ಮಕ್ಕಳಿಗೆ ನೀಡಬೇಕು. ಹಾಲಿನ ಪುಡಿಯಿಂದ ತಯಾರಿಸಲ್ಪಟ್ಟ ಹಾಲನ್ನು ಆಯಾ ದಿನದಂದೇ ಉಪಯೋಗಿಸಬೇಕು. ಮೂರು ಗಂಟೆಗೂ ಹೆಚ್ಚು ಕಾಲ ಇಡುವಂತಿಲ್ಲ.  ಹಾಲು ಕಾಯಿಸುವಾಗ  ಕೀಟಗಳು, ಹಲ್ಲಿ, ಧೂಳು ಬೀಳದಂತೆ ಎಚ್ಚರ ವಹಿಸಬೇಕು. ಹಾಲನ್ನು ಕುದಿಸದೇ ಸೇವಿಬಾರದು ಮತ್ತು ಹಾಲು ಕಾಯಿಸುವ ಕಾರ್ಯಕ್ಕೆ ಬಳಸುವ ಪರಿಕರಗಳನ್ನು  ಅಡುಗೆ ತಯಾರಿಸಲು ಬಳಸಬಾರದು ಎಂದು ಸಿಇಒ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಜೀವ ನಾಯಕ, ಜಿಲ್ಲೆಯ 717 ಕೇಂದ್ರಗಳಲ್ಲಿ ಹಾಲು ವಿತರಣೆಗೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್. ಡಿ.ಶರಣಪ್ಪ ಮಾತನಾಡಿ, ದೇಶದಲ್ಲಿ ಶೇ. 42ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಮತ್ತು ಸರ್ಕಾರಿ ಶಾಲೆಯಲ್ಲಿ ಹೆಚ್ಚು. ಆರು ವರ್ಷದೊಳಗಿನ 12 ಲಕ್ಷ ಮಕ್ಕಳು ಕಡಿವೆು ತೂಕ ಇದೆ ಎಂದು ಹೇಳಿದರು.

ಆರೋಗ್ಯಧಿಕಾರಿ ಡಿ.ಬಿ.ಚನ್ನಶೆಟ್ಟಿ, ಪಶಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಂಡಿ ಹಾಜರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.