ADVERTISEMENT

ಚಕ್ಕಡಿ ಮೆರವಣಿಗೆ, ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 10:20 IST
Last Updated 16 ಏಪ್ರಿಲ್ 2013, 10:20 IST

ನರಗುಂದ: ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ಆರ್.ಯಾವಗಲ್ ಸೋಮವಾರ  ನಾಮಪತ್ರ ಸಲ್ಲಿಸುವ ಸಲುವಾಗಿ ಸಹಸ್ರಾರು ಜನರೊಂದಿಗೆ ಬೃಹತ್ ಎತ್ತು ಚಕ್ಕಡಿಗಳೊಂದಿಗೆ  ಮಿನಿ ವಿಧಾನ ಸೌಧದವರೆಗೆ ಮೆರವಣಿಗೆ ಕೈಗೊಂಡರು.

ಹಳೇ ಎಪಿಎಂಸಿ ಆವರಣದಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಆರಂಭವಾದ ಬೃಹತ್ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಹಸ್ರಾರು ಕಾರ್ಯಕರ್ತರು ಎತ್ತು ಚಕ್ಕಡಿಗಳೊಂದಿಗೆ ಕಾಂಗ್ರೆಸ್ ಪರ ಘೊಷಣೆ  ಕೂಗುತ್ತಾ ಮೆರವಣಿ ಗೆಯಲ್ಲಿ ಪಾಲ್ಗೊಂಡರು.

ಉರಿಬಿಸಿಲನ್ನು ಲೆಕ್ಕಿಸದೇ ಸಹಸ್ರಾರು ಕಾರ್ಯಕರ್ತರು  ಎರಡು ಕಿ.ಮೀ ದೂರದ ಮಿನಿ ವಿಧಾನಸೌಧದವರೆಗೂ ಸಂಚರಿಸಿ ಯಾವಗಲ್‌ಪರ ಅಭಿಮಾನ ವ್ಯಕ್ತಪಡಿಸಿದ್ದು ಕಂಡು ಬಂತು.  ಯಾವಗಲ್‌ರವರು ಚಕ್ಕ ಡಿ ಯಲ್ಲಿಯೇ  ಎದ್ದು ನಿಂತು ರೋಡ್ ಶೋ ರೂಪದಲ್ಲಿ ಆಗಮಿಸಿ ಮತಯಾಚಿಸಿದ್ದು ಕಂಡು ಬಂತು.

ನಂತರ ಮಿನಿವಿಧಾನಸೌಧಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಬಂದು ಒಂದು ನಾಮಪತ್ರ ಸಲ್ಲಿಸಿ ತೆರಳಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ  ದಶರಥ ಗಾಣಿಗೇರ, ಚಂಬಣ್ಣ ವಾಳದ, ಎಸ್.ಡಿ.ಕೊಳ್ಳಿಯವರ, ರಾಜು ಕಲಾಲ, ಇಲ್ಲಿಯವರೆಗೆ ಬಿಎಸ್‌ಆರ್ ಪಕ್ಷದಲ್ಲಿದ್ದ ದೇಸಾಯಿಗೌಡ ಪಾಟೀಲ,  ಗುರು ದೊಡಮನಿ, ಗಿರೀಶ ಪಾಟೀಲ, ವಿ.ಎಸ್.ವೀರನಗೌಡ್ರ, ಸಿ.ಬಿ. ಪಾಟೀಲ, ದ್ಯಾಮಣ್ಣ ಸವದತ್ತಿ, ಬಿ.ಸಿ.ಬ್ಯಾಳಿ ಡಾ.ಸಂತೋಷ ಯಾವಗಲ್, ಪ್ರವೀಣ ಯಾವಗಲ್ ಸೇರಿದಂತೆ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.