ADVERTISEMENT

ಚನ್ನಮ್ಮನ ಜಯಂತಿ: ಸರ್ಕಾರಿ ಕಾರ್ಯಕ್ರಮವಾಗಲಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 8:55 IST
Last Updated 14 ಫೆಬ್ರುವರಿ 2012, 8:55 IST

ಲಕ್ಷ್ಮೇಶ್ವರ: ಸ್ವಾತಂತ್ರ್ಯಕ್ಕಾಗಿ  ಹೋರಾಟ ಮಾಡಿದ ಧೀರ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮನ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು ಎಂದು ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದ ಸಂಘದ ಅಧ್ಯಕ್ಷ ಡಾ.ಎಸ್‌ಬಿ. ಜವಾಯಿ, ಪುರಸಭೆ ನಾಮನಿರ್ದೇಶಿತ ಸದಸ್ಯ ಸೋಮಣ್ಣ ಮುಳಗುಂದ ಹಾಗೂ ಯುವಕ ನಾಗರಾಜ ಚಿಂಚಲಿ ಆಗ್ರಹಿಸಿದ್ದಾರೆ. 

 ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯರಲ್ಲಿ ಚನ್ನಮ್ಮ ಪ್ರಪ್ರಥಮವಾಗಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಮಹಿಳೆಯಾಗಿದ್ದು ಬ್ರಿಟಿಷರ ವಿರುದ್ಧ ಧೈರ್ಯದಿಂದ ಮಾಡಿದ ಹೋರಾಟ ಯಾರೂ ಮರೆಯುವಂತಿಲ್ಲ.

ಚನ್ನಮ್ಮ ಭಾರತೀಯರಲ್ಲಿ ಸ್ವಾಭಿಮಾನ ಮೂಡಿಸಿದ ಮಹಿಳೆಯಾಗಿದ್ದು ಅವರ ದೇಶ ಭಕ್ತಿ, ಪ್ರಜಾಪ್ರೀತಿ ಎಂದೆಂದಿಗೂ ಅಜರಾಮರ. ಚನ್ನಮ್ಮನ ಜಯಂತಿಯನ್ನು ಈಗಾಗಲೇ ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಿ ಆಚರಿಸಬೇಕಾಗಿತ್ತು. 

 ಆದರೆ ಈ ವಿಷಯದಲ್ಲಿ ಸರ್ಕಾರ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ಕಾರಣ ಈಗಲಾದರೂ ಸರ್ಕಾರ ಇತ್ತ ಗಮನ ಹರಿಸಿ ಚನ್ನಮ್ಮನ ಜಯಂತಿಯನ್ನು ಆಚರಿಸಲು ಮುಂದಾಗಬೇಕು ಎಂದು ತಾಲ್ಲೂಕು ಪಂಚಮಸಾಲಿ ಸಂಘದ ಯುವ ಘಟಕದ ಗೌರವಾಧ್ಯಕ್ಷ ಸುನೀಲ ಮಹಾಂತಶೆಟ್ಟರ, ಅಧ್ಯಕ್ಷ ಶಂಕರ ಬಾಳಿಕಾಯಿ, ಉಪಾಧ್ಯಕ್ಷ ಫಕ್ಕೀರೇಶ ಕವಲೂರ, ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಮಲ್ಲಿಕಾರ್ಜುನ ಕಳಸಾಪುರ ಮತ್ತಿತರರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಅದ್ದೂರಿ ಮೆರವಣಿಗೆ

ವೀರಾಣಿ ಕಿತ್ತೂರ ಚನ್ನಮ್ಮನ 188ನೇ ಜಯಂತೋತ್ಸವದ ಅಂಗವಾಗಿ ಇದೇ 14ರಂದು ತಾಲ್ಲೂಕು ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಅದ್ದೂರಿ ಮೆರವಣಿಗೆ ಸಂಘಟಿಸಲಾಗಿದೆ.

ಈ ಕುರಿತು ಸಂಘದ ಅಧ್ಯಕ್ಷ ಡಾ.ಎಸ್.ಬಿ. ಜವಾಯಿ ಸೋಮವಾರ ಮಾಹಿತಿ ನೀಡಿದರು. ಬೆಳಿಗ್ಗೆ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಇರುವ ವೀರಾಣಿ ಕಿತ್ತೂರು ಚನ್ನಮ್ಮನ ಪ್ರತಿಮೆಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಂತರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೋಮೇಶ್ವರ ತೇರಿನ ಮನೆಯ ಆವರಣಕ್ಕೆ ಆಗಮಿಸುವುದು. ನಂತರ ಮಧ್ಯಾಹ್ನ 2ಕ್ಕೆ ಅಲ್ಲಿ ಸಮಾಜ ಬಾಂಧವರ ಸಮಾವೇಶ ನಡೆಯುವುದು ಎಂದು ತಿಳಿಸಿದರು.

ವೀರಶೈವ ಪಂಚಮಸಾಲಿ ಸಮಾವೇಶ

ತಾಲ್ಲೂಕು ವೀರಶೈವ ಪಂಚಮಸಾಲಿ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಇದೇ 14ರಂದು ಮಧ್ಯಾಹ್ನ 2ಕ್ಕೆ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ ಜರುಗಲಿದೆ. 

 ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಸ್‌ಬಿ.ಜವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್‌ದೊಡ್ಡಗೌಡ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವನಗೌಡ್ರ ಕಂಠಿಗೌಡ್ರ, ಸದಸ್ಯರಾದ ಚೆನ್ನಪ್ಪ ಜಗಲಿ, ಶಾರದಾ ಕವಲೂರ, ಎಪಿಎಂಸಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಸದಸ್ಯರಾದ ಶಂಕರಗೌಡ ಪಾಟೀಲ, ನಾಗರಾಜ ಅಕ್ಕೂರ, ಚೆಂಬಣ್ಣ ಬಾಳಿಕಾಯಿ, ಚೆನ್ನಪ್ಪ ಕೊಡ್ಲಿವಾಡ, ತಿಪ್ಪಣ್ಣ ಕೊಂಚಿಗೇರಿ, ಎಸ್.ಟಿ. ಬಾಳಿಕಾಯಿ, ಟಿಎಪಿಸಿಎಂಎಸ್ ಅಧ್ಯಕ್ಷ ಗದಿಗೆಪ್ಪ ಯತ್ನಳ್ಳಿ, ಸದಸ್ಯ ದೇವಣ್ಣ ಬಳಿಗಾರ, ಶಂಕರಗೌಡ ಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ಬಸಣ್ಣ ಹಂಜಿ, ಸದಸ್ಯ ಈರಣ್ಣ ಕೊಡ್ಲಿವಾಡ, ವೀರನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಶಿರಹಟ್ಟಿ ವಿಎಸ್‌ಎಸ್ ಬ್ಯಾಂಕಿನ ಅಧ್ಯಕ್ಷ ಚೆನ್ನವೀರಪ್ಪ ಕಲ್ಯಾಣಿ, ಶಿಗ್ಲಿ ವಿಎಸ್‌ಸ್ ಬ್ಯಾಂಕಿನ ಅಧ್ಯಕ್ಷ ಶಿದ್ದಣ್ಣ ಯಲಿಗಾರ, ಗೂಳಪ್ಪ ದೇಸಿ, ರಾಜಶೇಖರ ಮೆಣಸಿನಕಾಯಿ, ಶಿವಪ್ಪ ಭಂಗಿ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಸೋಮಣ್ಣ ಕುಂಗುಂದ, ಸೋಮನಗೌಡ ಪಾಟೀಲ, ಮಂಜುನಾಥ ಮಾಗಡಿ, ಡಿ.ವೈ. ಹುನಗುಂದ, ಗಂಗಾಧರ ಶೆಟ್ಟಿಕೇರಿ ಸೇರಿದಂತೆ ಮತ್ತಿತರರಿಗೆ ಸನ್ಮಾನ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಲಿಂಬಿಕಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.