ADVERTISEMENT

ಜಿಲ್ಲೆಯಲ್ಲಿ ‘ನಿಫಾ’? ಜಾಗೃತಿಗೆ ಆದ್ಯತೆ

ಶಂಕಿತ ವ್ಯಕ್ತಿಗೆ ‘ಜಿಮ್ಸ್‌’ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 8:41 IST
Last Updated 25 ಮೇ 2018, 8:41 IST

ಗದಗ: 'ನಿಫಾ' ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ರೋಣ ತಾಲ್ಲೂಕಿನ ವ್ಯಕ್ತಿಯೊಬ್ಬರು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಜಿಮ್ಸ್) ಬುಧವಾರ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯಲ್ಲಿ ನಿಫಾ ವೈರಾಣು ತಡೆಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ಚಿಕಿತ್ಸೆಗೆ ದಾಖಲಾಗಿರುವ ವ್ಯಕ್ತಿ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಈ ವೈರಾಣು ಹರಡಿದ ಬೆನ್ನಲ್ಲೇ ಸ್ವಗ್ರಾಮಕ್ಕೆ ಮರಳಿದ್ದರು. ತಲೆಸುತ್ತು, ಕೆಮ್ಮಿನಿಂದ ಬಳಲುತ್ತಿದ್ದ ಅವರು, ರೋಣ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋಗಿದ್ದರು. ನಿಫಾ ಸೋಂಕಿನ ಕೆಲ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ತಕ್ಷಣ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು.

ಬಾವಲಿಗಳಿಂದ ‘ನಿಫಾ’ಸೋಂಕು ಹರಡುತ್ತದೆ ಎಂಬ ಮಾಹಿತಿ ಜಿಲ್ಲೆಯ ಜನರ ನಿದ್ರೆಗೆಡಿಸಿದೆ. ಜಿಲ್ಲಾ ಕೇಂದ್ರ ಗದುಗಿನ ಹಳೆಯ ಬಸ್ ನಿಲ್ದಾಣ ಸಮೀಪದಲ್ಲೇ ಸಾಕಷ್ಟು ಬಾವಲಿಗಳು ಬೀಡುಬಿಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ADVERTISEMENT

‘ನಿಫಾ’ ಶಂಕಿತ ವ್ಯಕ್ತಿಗೆ ‘ಜಿಮ್ಸ್‌’ನಲ್ಲಿ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಇತರ ರೋಗಿಗಳು ಭಯಗೊಂಡಿದ್ದಾರೆ. ರೋಗಿಗಳ ಸಂಬಂಧಿಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಓಡಾಡುತ್ತಿದ್ದಾರೆ.

‘ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ಪ್ರತಿ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನದಿರುವಂತೆ ಜನರಿಗೆ ಮಾಹಿತಿ ನೀಡಲಾಗುವುದು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಪಿ.ಎಚ್‌.ಕಬಾಡಿ ಹೇಳಿದರು.

ನಿಫಾ ಇರುವುದು ಇನ್ನೂ ದೃಢಪಟ್ಟಿಲ್ಲ

ಚಿಕಿತ್ಸೆಗೆ ದಾಖಲಾಗಿರುವ ವ್ಯಕ್ತಿಯ ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪುಣೆಯ ಎನ್ಐವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 48 ಗಂಟೆಗಳ ಒಳಗಾಗಿ ವರದಿ ಕೈಸೇರುವ ನಿರೀಕ್ಷೆ ಇದ್ದು, ಆ ನಂತರವಷ್ಟೇ ನಿಫಾ ಇದೆಯೇ, ಎಲ್ಲವೇ ಎನ್ನುವುದನ್ನು ಖಚಿತಪಡಿಸಲು ಸಾಧ್ಯ. ಅದುವರೆಗೆ ಇದು ಶಂಕಿತ ಪ್ರಕರಣ ಮಾತ್ರ. ಸದ್ಯ ವಿಶೇಷ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ‘ಜಿಮ್ಸ್‌’ ನಿರ್ದೇಶಕ ಪಿ.ಎಸ್‌.ಬೂಸರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.