ADVERTISEMENT

ಜೀವಬೆದರಿಕೆ: ಜೆಡಿಯು ಆರೋಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:38 IST
Last Updated 26 ಏಪ್ರಿಲ್ 2013, 6:38 IST

ಗದಗ: `ಕಾಂಗ್ರೆಸ್ ಹೆಸರು ಹೇಳಿಕೊಂಡು ಕೆಲವರು ನನಗೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ' ಎಂದು ಗದಗ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅಬ್ದುಲ್ ರಹೆಮಾನ ತಿರ್ಲಾಪೂರ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಿದ್ದಾರೆ. ಬೆದರಿಕೆಗೆ ಅಂಜದೇ  ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮನೆ, ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇನೆ. ಮುಂದೆ ಇದೇ ರೀತಿ ಬೆದರಿಕೆ ಕರೆ ಬಂದರೆ ಪಕ್ಷದ ನಾಯಕರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ, ದೇಶದಲ್ಲಿ ಜಾತ್ಯತೀತ ಪ್ರಧಾನಿಯಾದರೆ ಮಾತ್ರ ಹಿಂದುಳಿದ ಪ್ರದೇಶಗಳು ಅಭಿವೃದ್ಧಿ ಹೊಂದಲು ಸಾಧ್ಯ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಸರ್ಕಾರವೇ  ಚುನಾವಣೆಯ ಖರ್ಚು ಮತ್ತು ವೆಚ್ಚ ಭರಿಸಿದಾಗ ಮಾತ್ರ ಸಾಮಾನ್ಯ ಅಭ್ಯರ್ಥಿ ಜನಪ್ರತಿನಿಧಿ ಯಾಗಲು ಸಾಧ್ಯ.

ಶಿರಹಟ್ಟಿ ಕ್ಷೇತ್ರದಿಂದ ಬೆನಕಪ್ಪ ಪೂಜಾರ ಹಾಗೂ ಗದಗ  ಕ್ಷೇತ್ರದಿಂದ ಅಬ್ದುಲ್ ರಹೆಮಾನ ತಿರ್ಲಾ ಪೂರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಶಾಂತೇಶ ಚವಡಿ, ಪ್ರಧಾನ ಕಾರ್ಯದರ್ಶಿ ಜಾಕೀರ್ ನಾಗನೂರ, ದಾದಾಪೀರ ಯಾದಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT