ADVERTISEMENT

ತಂಪೆರೆದ ಕದ್ರಿ-ಗೋಡ್ಖಿಂಡಿ ಜುಗಲ್‌ಬಂದಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 9:35 IST
Last Updated 8 ಮಾರ್ಚ್ 2011, 9:35 IST
ತಂಪೆರೆದ ಕದ್ರಿ-ಗೋಡ್ಖಿಂಡಿ ಜುಗಲ್‌ಬಂದಿ
ತಂಪೆರೆದ ಕದ್ರಿ-ಗೋಡ್ಖಿಂಡಿ ಜುಗಲ್‌ಬಂದಿ   

ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆ (ಲಕ್ಕುಂಡಿ): ಬಿರುಬಿಸಿಲಿನ ಝಳಕ್ಕೆ ಬಸವಳಿದು ಹೋಗಿದ್ದ ಜನರಿಗೆ ಕದ್ರಿ ಗೋಪಾಲನಾಥ್ ಹಾಗೂ ಪ್ರವೀಣ್ ಗೋಡ್ಖಿಂಡಿಯ ಜುಗಲ್ ಬಂದಿ ತಂಪನ್ನೆರೆಯಿತು. ಇವರಿಬ್ಬರ ವಾದನ ಮೋಡಿಯನ್ನು ಸ್ವಲ್ಪ ಹೊತ್ತು ಸವಿದ ಸೂರ್ಯ ಆಕಳಿಸುತ್ತಲೆ ಪಡುವಣ ದಿಕ್ಕಿಗೆ ಹೋಗಿ ನಿದ್ದೆಗೆ ಜಾರಿದ.

ಹೊತ್ತು ಮುಳುಗುತ್ತಿದ್ದಂತೆ ತಾರಕಕ್ಕೆರಿದ ಜುಗಲ್ ಬಂದಿಯಲ್ಲಿ ಇಬ್ಬರು ಮಹಾನ್ ಕಲಾವಿದರು ತುರುಸಿಗೆ ಬಿದ್ದವರಂತೆ ವಾದನ ನುಡಿಸಿದರು. ಸ್ಯಾಕ್ಸೋಫೋನ್ ಹಾಗೂ ಕೊಳಲಿನಿಂದ ಹೊರಟ ಸ್ವರಗಳು ಹೊಸ ಅನುಭವ ನೀಡಿದವು. ಮಲ್ಲಿಗೆ, ಕನಕಾಂಬರ, ಸೇವಂತಿಯ ಘಮಲಿನ ಲಕ್ಕುಂಡಿಯಲ್ಲಿ  ಸಂಗೀತ ನಿನಾದ ಮಂದಗಾಮಿನಿಯಂತೆ  ಹರಿಯಿತು. ಝುಳು ಝುಳು ನಿನಾದದೊಂದಿಗೆ ಹರಿಯುತ್ತ ಸಾಗಿದ ನದಿ ಒಮ್ಮೆಲೆ ರಭಸದಿಂದ ಓಡಿದರೆ, ಒಂದೊಂದು ಸಾರಿ ಧುಮ್ಮಿಕ್ಕುವ ಜಲಪಾತದಂತೆ ಭೋರ್ಗೆರೆಯಿತು. ಕೊನೆಗೆ ಮುಂಗಾರು ಮಳೆ ಬಿದ್ದ ತರುವಾಯ ಆವರಿಸುವ ಪ್ರಶಾಂತ ವಾತಾವರಣ ನಿರ್ಮಾಣವಾಯಿತು.

ಇವರಿಬ್ಬರ ಜೊತೆ ತಬಲಾ- ರಾಜೇಂದ್ರ ನಾಕೋಡ್, ಮೃದಂಗ- ಬೆಂಗಳೂರು  ರಾಜಶೇಖರ, ಮೋರ್ಚಿಂಗ್- ವಿದ್ವಾನ್ ರಾಜಶೇಖರ್ ತಾವು ಏನು ಕಮ್ಮಿ ಇಲ್ಲ ಎನ್ನುವಂತೆ ಉತ್ತಮ ಸಾಥ್ ನೀಡಿ ಮೆರುಗು ಸೃಷ್ಟಿಸಿದರು.

ಸುಮಾರು ಅರ್ಧ ಗಂಟೆ  ಕಾಲ ನಡೆದ ಜುಗಲ್‌ಬಂದಿಗೆ ಲಕ್ಕುಂಡಿ ಉತ್ಸವ ವೇದಿಕೆಯನ್ನು ಒದಗಿಸಿಕೊಟ್ಟಿತ್ತು. ಕೊಲ್ಕತ್ತಾದ ಅರ್ಪಿತಾ ಬ್ಯಾನರ್ಜಿ ಹಾಗೂ ತುಷಾರ ಭಟ್ ಅವರಿಂದ ಕೃಥಕ್ ನೃತ್ಯ, ಮಂಗಳೂರಿನ ಸನಾತನ ನಾಟ್ಯಾಲಯದ ರಾಷ್ಟ್ರ ದೇವೋಭವ ನೃತ್ಯ ರೂಪಕ, ಸಂಗೀತಾ ಕಟ್ಟಿ ಹಾಗೂ ತಂಡದವರಿಂದ ಸಂಗೀತ ವೈವಿಧ್ಯ ಆಕರ್ಷಕವಾಗಿದ್ದವು. ಬಿ. ಪ್ರಾಣೇಶ, ನರಸಿಂಹ ಜೋಶಿ ಹಾಗೂ ಬಸವರಾಜ ಮಹಾಮನಿ ನಡೆಸಿಕೊಟ್ಟ ಹಾಸ್ಯರಸ ಕಾರ್ಯಕ್ರಮಕ್ಕೆ ಜನರು ಬಿದ್ದು ಬಿದ್ದು ನಕ್ಕರು.

ಪ್ರಕಾಶ ಮಲ್ಲಿಗವಾಡ ಹಾಗೂ ತಂಡದವರ ಜಾನಪದ ನೃತ್ಯ, ರಾಮಕೃಷ್ಣ ಸುಗಂಧಿ ಹಾಗೂ ತಂಡದವರ ನಾಗನೃತ್ಯ ಮನಮೋಹಕ ವಾಗಿತ್ತು. ಸೋಮವಾರ ನಡೆದ ಸಮಾರೋಪ ಸಮಾರಂಭದ ನಂತರ ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.