ADVERTISEMENT

ತಪ್ಪು ಮನ್ನಿಸಿ, ಕಾಂಗ್ರೆಸ್ ಬೆಂಬಲಿಸಿ: ಎಚ್ಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:25 IST
Last Updated 3 ಅಕ್ಟೋಬರ್ 2012, 5:25 IST

ಗದಗ: ನಾಯಕರು ಮಾಡಿರುವ ತಪ್ಪುಗಳನ್ನು ಮನ್ನಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮಾಜಿ ಸಚಿವ ಎಚ್.ಕೆ. ಪಾಟೀಲ ಜನತೆಗೆ ಮನವಿ ಮಾಡಿದರು.

ತಾಲ್ಲೂಕಿನ ಅಡವಿಸೋಮಾಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯವಾಗಿ, ಸಾಮಾಜಿಕವಾಗಿ ತಪ್ಪುಗಳಾಗಿರಬಹುದು. ತಪ್ಪು ಗಳನ್ನು ತಿದ್ದುಕೊಳ್ಳಲು ಅವಕಾಶ ನೀಡಿ. ವೈಯಕ್ತಿಕ ಕಾರಣಗಳಿಗೆ ಕಾಂಗ್ರೆಸ್‌ನಿಂದ ದೂರವಿದ್ದವರೂ ದೇಶದ ದೃಷ್ಟಿಯಿಂದ ಪಕ್ಷಕ್ಕೆ ಮರಳುವಂತೆ ಪಾಟೀಲ ಕರೆ ನೀಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ದೇವರಾಜ ಅರಸು ಅವರು ಭೂಸುಧಾರಣಾ ಕಾಯ್ದೆ ಜಾರಿಗೆ ತಂದರು. ಪರಿಶಿಷ್ಟರಿಗೆ, ಹಿಂದುಳಿದವರಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿತು. ರಾಜ್ಯದಲ್ಲಿ ಹತ್ತು ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದೆ ಎಂದು ಆರೋಪಿಸಿದರು.

ಏಳು ಮಂದಿ ಜೈಲು ಸೇರಿದರು. ಯಡಿಯೂರಪ್ಪ ಜೈಲು ಸೇರುವ ಮೂಲಕ ಕರ್ನಾಟಕಕ್ಕೆ ಕಳಂಕ ತಂದರು. ಇನ್ನು ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದರು. ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರವನ್ನು ವೀಕ್ಷಿಸಿ ಪಾವಿತ್ರ್ಯತೆ ಹಾಳು ಮಾಡಿದರು. ಜನತೆ ಜಾಗೃತರಾಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಬರಗಾಲ ಆವರಿಸಿದೆ. ಮೋಡ ಬಿತ್ತನೆಗೆ  ರೂ. 10 ಕೋಟಿ ವೆಚ್ಚವಾಗಲಿದೆ. ಕೇವಲ ಸಚಿವರು ಭರವಸೆ ನೀಡುತ್ತಿದ್ದಾರೆಯೇ ಹೊರತು ಮೋಡ ಬಿತ್ತನೆ ಕಾರ್ಯ ಕೈಗೊಂಡಿಲ್ಲ ಎಂದು ಟೀಕಿಸಿದರು.

ಮಾಜಿ ಶಾಸಕರಾದ ಜಿ.ಎಸ್. ಪಾಟೀಲ, ಬಿ.ಆರ್.ಯಾವಗಲ್, ಜಿಲ್ಲಾಧ್ಯಕ್ಷ ಗಡ್ಡದೇವರ ಮಠ, ವಾಸಣ್ಣ ಕುರಡಗಿ, ನೀಲಮ್ಮ ಹಾಜರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.