ADVERTISEMENT

`ದಿವ್ಯದೃಷ್ಟಿ ಅನುಗ್ರಹಿಸಿದ ಅಪೂರ್ವ ಗ್ರಂಥಗಳು'

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:10 IST
Last Updated 19 ಜುಲೈ 2013, 6:10 IST

ಗದಗ: ಸಿದ್ಧಾಂತ ಶಿಖಾಮಣಿ ಮತ್ತು ಶ್ರೀಮದ್ ಭಗವದ್ಗೀತೆಗಳು ಮನುಕುಲಕ್ಕೆ ದಿವ್ಯದೃಷ್ಟಿ ಅನುಗ್ರಹಿಸುವ ಅಪೂರ್ವ ಗ್ರಂಥಗಳು ಎಂದು ಕಾಶಿಯ ಜಂಗಮವಾಡಿ ಮಠದ  ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಪಂಚಾಚಾರ್ಯ ಸೇವಾ ಸಂಘದ ವತಿಯಿಂದ ಆಷಾಢ ಮಾಸದ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮನಿ ಹಾಗೂ ಶ್ರೀಮದ್ ಭಗವದ್ಗೀತೆ ಉಪದೇಶಾಮೃತ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಪಂಚ ನೋಡಲು ಪರಮಾತ್ಮ  ಚರ್ಮ ಚಕ್ಷುಗಳನ್ನು ಕೊಟ್ಟಿದ್ದಾನೆ.

ಅವುಗಳಿಂದ ಪರಮಾತ್ಮನನ್ನು ಕಾಣಲು ಆಗುವುದಿಲ್ಲ. ಆದರೆ ಪರಮಾತ್ಮನನ್ನು ನೋಡಲು ದಿವ್ಯದೃಷ್ಟಿ ಬೇಕಾಗುವುದು. ಆ ದೃಷ್ಟಿಯನ್ನು ಅನುಗ್ರಹಿಸುವ ಗ್ರಂಥಗಳೇ ಸಿದ್ಧಾಂತ ಶಿಖಾಮಣಿ ಹಾಗೂ ಭಗವದ್ಗೀತೆ ಎಂದು ಹೇಳಿದರು.

ನಾಲ್ಕು ವೇದಗಳ ಕೊನೆ ಭಾಗವಾದ ಉಪನಿಷತ್ತುಗಳನ್ನು ಆಧಾರವಾಗಿ ಇಟ್ಟುಕೊಂಡು ವ್ಯಾಸ ಮಹರ್ಷಿಯು ಶ್ರೀಮದ್ ಭಗವದ್ಗೀತೆಯನ್ನು ರಚಿಸಿದ್ದಾನೆ. ಅದರಂತೆ 28 ಶಿವಾಗಮಗಳನ್ನು ಆಧಾರವಾಗಿ ಇಟ್ಟುಕೊಂಡು  ಶಿವಯೋಗಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿ ರಚಿಸಿದ್ದಾರೆ.

ಗೀತೆಯಲ್ಲಿ ಕೃಷ್ಣ-ಅರ್ಜುನ ಸಂವಾದವಿದೆ.  ಸಿದ್ಧಾಂತ ಶಿಖಾಮಣಿಯಲ್ಲಿ ರೇಣುಕ, ಅಗಸ್ತ ಮಹರ್ಷಿಯರ ಸಂವಾದವಿದೆ. ಎರಡೂ ಗ್ರಂಥಗಳ ಮೂಲಗಳು ವೇದಾಗಮಗಳೇ ಆಗಿವೆ. ಆದ್ದರಿಂದ ಜಗತ್ತಿನ ಪ್ರತಿಯೊಬ್ಬ ಮಾನವರು ಈ ಗ್ರಂಥಗಳ ಪಾರಾಯಣ ಮಾಡುವುದರ ಜೊತೆಗೆ ಅವುಗಳ ಮೇಲಿನ ಪ್ರವಚನಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರೂ ಪರಮಾತ್ಮನನ್ನು ಕಾಣುವ ದಿವ್ಯದಷ್ಟಿಯನ್ನು ಪಡೆದುಕೊಳ್ಳಬಹುದು ಎಂಬ ನುಡಿದರು.

ಸಾನಿಧ್ಯ ವಹಿಸಿ ಮಾತನಾಡಿದ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಧರ್ಮಗ್ರಂಥಗಳ ಅಧ್ಯಯನ ಮತ್ತು ಶ್ರವಣದಿಂದ ಮೋಕ್ಷಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಪ್ರಕಾಶಕ ಬಸವರಾಜ ಶಾಬಾದಿಮಠ, ವರ್ತಕ ಸೋಮಣ್ಣ ಮಲ್ಲಾಡದ, ಪತ್ರಿಕೋದ್ಯಮಿ ಮಂಜುನಾಥ ಅಬ್ಬಿಗೇರಿ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಾಜಶೇಖರ ಶಿರೂರ, ವಿ.ಆರ್. ಮಾಳೆಕೊಪ್ಪ ಮಠ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT