ADVERTISEMENT

ದುರ್ಗಾದೇವಿ ಜಾತ್ರೆಗೆ ಅದ್ದೂರಿ ಆರಂಭ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 5:25 IST
Last Updated 22 ಜೂನ್ 2011, 5:25 IST

ಗದಗ: ನಗರದ ಗಂಗಾಪೂರ ಪೇಟೆ ಯಲ್ಲಿರುವ ದುರ್ಗಾದೇವಿ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಆರಂಭಗೊಂಡಿದ್ದು, ಈ ತಿಂಗಳ 29ರವರೆಗೆ ನಡೆಯಲಿದೆ. ಈ ಅಂಗವಾಗಿ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ.

ದುರ್ಗಾದೇವಿಯ ರಥೋತ್ಸವ ಸಮಿತಿ ಕಾರ್ಯದರ್ಶಿ ಶೇಖರ ಎಂ. ಕವಳಿಕಾಯಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಗದುಗಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ದುರ್ಗಾದೇವಿಯ ಜಾತ್ರೆಯು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಬಾರಿ ಜಾತ್ರೆಯ ಅಂಗವಾಗಿ 22ರಂದು ಸಂಜೆ 7ಕ್ಕೆ `ಏಡ್ಸ್ ಮತ್ತು ಮಹಿಳೆ~ ಕುರಿತು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಉಪನ್ಯಾಸ ನೀಡಲಿದ್ದಾರೆ. ಶಿವಶರಣೆ ನೀಲಮ್ಮತಾಯಿ ಅಸುಂಡಿ ಸಾನ್ನಿಧ್ಯ ವಹಿಸದ್ದಾರೆ. ನಂತರ ಮಂಜುನಾಥ ನೀರಲಗಿ ಹಾಗೂ ತಂಡದವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 23ರಂದು ಅಭಿನವ ಬೂದಿಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಹಾಯಕ ಕೃಷಿ ಅಧಿಕಾರಿ ಅಡಿವೆಪ್ಪ ಪಲ್ಲೇದ ಉಪನ್ಯಾಸ ನೀಡಲಿದ್ದಾರೆ.

24ರಂದು ಸಕಲ ಮಂಗಳ ವಾದ್ಯದೊಂದಿಗೆ ಊರ ದೇವರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಡೊಳ್ಳಿನ ಹಬ್ಬ ಎಂದೇ ಖ್ಯಾತಿಯಾದ ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ 30ಕ್ಕೂ ಹೆಚ್ಚು ಡೊಳ್ಳು ತಂಡಗಳು ಪಾಲ್ಗೊಳ್ಳಲಿವೆ ಎಂದರು.

25ರಂದು ದುರ್ಗಾದೇವಿಯ ಮಹಾ ರಥೋತ್ಸವ ಹಾಗೂ 26ರಂದು ದುರ್ಗಾದೇವಿಯ ಲಘು ರಥೋತ್ಸವ, ಕಡುಬಿನ ಕಾಳಗ ಜರುಗಲಿದೆ ಎಂದು ತಿಳಿಸಿದರು.

ಸಾಮೂಹಿಕ ವಿವಾಹ: ಜಾತ್ರೆ ಅಂಗ ವಾಗಿ ಈ ತಿಂಗಳ 27ರಂದು ಬೆಳಿಗ್ಗೆ 10ಕ್ಕೆ ದೇವಸ್ಥಾನದ ಆವರಣದಲ್ಲಿ ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಗಳ ಸಹಯೋಗದಲ್ಲಿ ಬಸವತತ್ವದ ಪ್ರಕಾರ 51 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ನಂತರ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು. ಲಿಂಗಾಯತ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಾತ್ರಾ ಸಮಿತಿ ಅಧ್ಯಕ್ಷ ವೀರಜಿಬಾಯಿ ಎ. ಪಟೇಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಸಿ.ಸಿ. ಪಾಟೀಲ, ಬಿ. ಶ್ರೀರಾಮುಲು, ಶಾಸಕ ಶ್ರೀಶೈಲಪ್ಪ ಬಿದರೂರ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು  ತಿಳಿಸಿದರು.

28ರಂದು ಸಂಜೆ 4ಕ್ಕೆ ಡಂಬಳ ನಾಕಾದಲ್ಲಿ ಮಕ್ತುಂಸಾಬ ಪೈಲವಾನ ಕದಡಿ ಮತ್ತು ಸುಭಾಸ ಕಟಗೇರಿ ನೇತೃತ್ವದಲ್ಲಿ ಬಯಲು ಕುಸ್ತಿಗಳು ನಡೆಯಲಿವೆ. 29ರಂದು ಬುಧವಾರ ದೇವಸ್ಥಾನದ ಬಯಲು ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಸಮಿತಿ ಅಧ್ಯಕ್ಷ ವೀರಜೀಬಾಯಿ ಎ.ಪಟೇಲ, ನಗರಸಭೆ ಸದಸ್ಯ ಸಿದ್ದು ಪಲ್ಲೇದ ಹಾಗೂ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.