ಗದಗ: ಜಿಲ್ಲೆಯಲ್ಲಿ ಇದೇ 12 ರಿಂದ 27ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು 23 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 6,535 ವಿದ್ಯಾರ್ಥಿಗಳು ಮತ್ತು 5,642 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 12,177 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷೆಗಳು ಸುಗಮವಾಗಿ, ನಕಲು ನಡೆಯದಂತೆ ಹಾಗೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಗದಿತ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಇದರ ವ್ಯಾಪ್ತಿಯ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ಗುಂಪುಗಳ ಪ್ರವೇಶ, ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಈ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಸಿಬ್ಬಂದಿ ಹಾಗೂ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ವ್ಯವಸ್ಥೆಗೆ ಸೂಕ್ತ ಏರ್ಪಾಡು ಮಾಡಿಕೊಳ್ಳಬೇಕು. ಪರೀಕ್ಷಾ ಅಕ್ರಮ ಇತ್ಯಾದಿ ತಡೆಗೆ ನೇಮಿಸಲಾಗುವ ತಂಡಗಳು ಶ್ರದ್ಧೆಯಿಂದ ಕೆಲಸ ನಿರ್ವವಹಿಸಬೇಕು ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿ ಯಾವುದೇ ಕಾರಣಕ್ಕೂ ನೆಲದ ಮೇಲೆ ಕುಳಿತುಕೊಳ್ಳದಂತೆ ಎಚ್ಚರವಹಿಸಿ, ಪ್ರತಿ ವಿದ್ಯಾರ್ಥಿಗೂ ಡೆಸ್ಕ್ ವ್ಯವಸ್ಥೆ ಕಲ್ಪಿಸಲು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್.ಗೌಡರ್ ಮಾತನಾಡಿ, ಕಲಾ ವಿಭಾಗದಿಂದ 6697, ವಾಣಿಜ್ಯ ವಿಭಾಗದಿಂದ 3500, ವಿಜ್ಞಾನ ವಿಭಾಗದ 1980, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಒಟ್ಟಾರೆ ನಿಯಮಿತ 9720, 650 ಖಾಸಗಿ ಅಭ್ಯರ್ಥಿಗಳು ಹಾಗೂ ಪುನರಾವರ್ತಿತ 1807 ಪರೀಕ್ಷಾರ್ಥಿಗಳು ಇದ್ದಾರೆ ಎಂದು ತಿಳಿಸಿದರು.
ಪದವಿ ಪೂರ್ವ ಮಂಡಳಿಯಿಂದ ವಿಭಾಗ ಮಟ್ಟದ ಎರಡು ಹಾಗೂ ಜಿಲ್ಲೆಗೆ ಎಂಟು ಮೊಬೈಲ್ ಸ್ಕ್ವಾಡ್ ಹಾಗೂ ಜಿಲ್ಲೆಯಿಂದ ಪ್ರತಿ ತಾಲ್ಲೂಕಿಗೆ ಒಂದರಂತೆ ವಿಶೇಷ ಜಾಗೃತ ದಳ ರಚಿಸಲಾಗುತ್ತಿದೆ. ಅವುಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲಿವೆ. ಇದಲ್ಲದೆ ಒಂದು ಸಿಟ್ಟಿಂಗ್ ಸ್ಕ್ವಾಡ್ ಪರೀಕ್ಷಾ ಕೇಂದ್ರದಲ್ಲೇ ಇರುತ್ತದೆ. ಜಿಲ್ಲೆಯಲ್ಲಿ 89 ಪದವಿ ಕಾಲೇಜುಗಳಿದ್ದು, 23 ಪರೀಕ್ಷಾ ಕೇಂದ್ರಗಳಿವೆ ಎಂದು ಸಭೆಗೆ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲೆಯ ವಿವಿಧ ಪದವಿ ಪೂರ್ವ ಮಹಾವಿದ್ಯಾಲಯಗಳ ಪ್ರಾಂಶುಪಾಲರು ಸಭೆಯಲ್ಲಿ ಭಾಗವಹಿಸಿದ್ದರು.
ಪರೀಕ್ಷೆಗಳು ಬೆಳಿಗ್ಗೆ 9 ರಿಂದ 12.15ರ ವರೆಗೆ ನಡೆಯಲಿದೆ. 12ರಂದು ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ, 13 ರಂದು ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, 14ರಂದು ಸಮಾಜ ಶಾಸ್ತ್ರ, ಲೆಕ್ಕಶಾಸ್ತ್ರ, 15ರಂದು ಭೌತಶಾಸ್ತ್ರ, ಮನಃಶಾಸ್ತ್ರ ಮಧ್ಯಾಹ್ನ 2ರಿಂದ 5.15ರ ವರೆಗೆ, ಕರ್ನಾಟಕ, ಹಿಂದುಸ್ತಾನಿ ಸಂಗೀತ. 16 ರಜೆ ದಿನ.
17ರಂದು ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ ಮತ್ತು 18ರಂದು ಗಣಿತ, ಭೂಗೋಳಶಾಸ್ತ್ರ, 19 ಐಚ್ಛಿಕ ಕನ್ನಡ, ಗೃಹವಿಜ್ಞಾನ, ಬೇಸಿಕ್ ಮ್ಯಾಥ್ಸ್, 20ರಂದು ರಸಾಯನಶಾಸ್ತ್ರ, ವ್ಯವಹಾರ ಅಧ್ಯಯನ, 21ರಂದು ತರ್ಕಶಾಸ್ತ್ರ, ಶಿಕ್ಷಣ, 22 ರಂದು ಇತಿಹಾಸ, ಗಣಕ ವಿಜ್ಞಾನ, 23 ರಜೆ. 24ರಂದು ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್, ಮಧ್ಯಾಹ್ನ 2ರಿಂದ 5.15ರ ವರೆಗೆ ಫ್ರೆಂಚ್, 25ರಂದು ಮರಾಠಿ, ಉರ್ದು, ಸಂಸ್ಕೃತ, 26ರಂದು ಇಂಗ್ಲಿಷ್, 27ರಂದು ಹಿಂದಿ ಮತ್ತು ತೆಲುಗು. ಪರೀಕ್ಷಾ ವಿಷಯ ಕುರಿತ ಪದವಿ ಪೂರ್ವ ಮಂಡಳಿಯ ಸಹಾಯವಾಣಿ ಸಂ: 080-23361856/23361858 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.