ADVERTISEMENT

ನರಗುಂದದಲ್ಲಿ ಮಳೆ, ಗಾಳಿಗೆ ಉರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 14 ಮೇ 2018, 11:18 IST
Last Updated 14 ಮೇ 2018, 11:18 IST
ನರಗುಂದದಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ಮರ ವಿದ್ಯುತ್‌ ತಂತಿ ಮೇಲೆ ಉರುಳಿ ಸಂಚಾರಕ್ಕೆ ತೊಂದರೆಯಾದ ದೃಶ್ಯ
ನರಗುಂದದಲ್ಲಿ ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ಮರ ವಿದ್ಯುತ್‌ ತಂತಿ ಮೇಲೆ ಉರುಳಿ ಸಂಚಾರಕ್ಕೆ ತೊಂದರೆಯಾದ ದೃಶ್ಯ   

ನರಗುಂದ: ಪಟ್ಟಣದ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆ ಸುರಿದು ಕೆಲವಡೆ ಜನಜೀವನ ಅಸ್ತವ್ಯಸ್ತಗೊಳಿಸಿದೆ.

ಸಂಜೆ 6ರ ಸುಮಾರಿಗೆ ಜೋರಾದ ಗಾಳಿ ಬೀಸಿದ ಪರಿಣಾಮ ಸವದತ್ತಿ ರಸ್ತೆ, ಬಸ್‌ ನಿಲ್ದಾಣದ ಸಮೀಪ, ಸರಕಾರಿ ಆಸ್ಪತ್ರೆ ಸಮೀಪ ಮರಗಳು ಉರುಳಿವೆ. ಸವದತ್ತಿ ರಸ್ತೆ ಬಳಿ ಹಾಗೂ ವಿನಾಯಕ ನಗರದಲ್ಲಿ ಮರಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದು ಆ ತಂತಿ ರಸ್ತೆ ಮೇಲೆ ಬಿದ್ದ ಪರಿಣಾಮ ಸಂಚರಿಸಲು ಆಗದಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಕೆಲವು ಮನೆಗಳ ತಗಡುಗಳು ಹಾರಿ ಹೋಗಿವೆ.

ಮರಗಳು ಹೆಚ್ಚಾಗಿ ಉರುಳಿದ ಪರಿಣಾಮ ಅಲ್ಲಲ್ಲಿ ಸಂಚಾರ ಮಾಡಲು ತೊಂದರೆ ಹೆಚ್ಚಾಗಿದೆ. ಮಳೆಯ ಆರ್ಭಟ ಭಾನುವಾರ ತುಸು ಜೋರಾಗಿ ಕಂಡು ಬಂತು. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.

ADVERTISEMENT

ಬಿಸಿಲಿನ ಬೇಗೆ ಕಡಿಮೆ ಮಾಡಿದರೂ ಮಳೆ ಜೋರಾಗಿ ಸುರಿದ ಪರಿಣಾಮ ಚರಂಡಿಗಳು ತುಂಬಿ ಹರಿದು ಸಂಚಾರಕ್ಕೆ ತೊಂದರೆ ಉಂಟಾಯಿತು.

ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಅಲ್ಲಿಯ ನಿವಾಸಿಗಳಿಗೆ ತೊಂದರೆ ಉಂಟಾಯಿತು. ಆ ನೀರನ್ನು ಹೊರಚೆಲ್ಲಲು ಹರಸಾಹಸ ಪಡ ಬೇಕಾಯಿತು. ಈ ಮಳೆ ರೈತರು ಹೊಲಕ್ಕೆ ತೆರಳಿ ಕೃಷಿ ಚಟುವಟಿಕೆ ಮಾಡಲು ಮುನ್ಸೂಚನೆ ನೀಡಿದಂತಾಗಿದೆ.

ಗದಗ ಜಿಲ್ಲೆಯಾದ್ಯಂತ ಭರ್ಜರಿ ಮಳೆ

ಗದಗ: ಗದಗ–ಬೆಟಗೇರಿ ಅವಳಿ ನಗರ, ನರಗುಂದ, ಲಕ್ಷ್ಮೇಶ್ವರ, ನರೇಗಲ್‌ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.

ನರಗುಂದ ತಾಲ್ಲೂಕಿನಾದ್ಯಂತ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಕೆಲವಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಲವೆಡೆ ಮರಗಳು ಉರುಳಿ, ವಿದ್ಯುತ್‌ ತಂತಿಯ ಮೇಲೆ ಬಿದ್ದಿದ್ದರಿಂದ ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾಯಿತು.

ಕೆಲವು ಮನೆಗಳ ಚಾವಣಿಗೆ ಹೊದಿಸಿದ ತಗಡಿನ ಶೀಟ್‌ಗಳು ಹಾರಿಹೋಗಿವೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ, ಅಲ್ಲಿನ ನಿವಾಸಿಗಳು ಪರದಾಡಿದರು. ಕೆಲ ಕಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.ಗದಗ ಜಿಲ್ಲೆಯ ಡಂಬಳ ಮತ್ತು ಇತರ ಕಡೆಗಳಲ್ಲೂ ರಾತ್ರಿ ಭಾರಿ ಮಳೆಯಾಗಿರುವ ವರದಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.