ADVERTISEMENT

ನರಗುಂದ ಬಂಡಾಯದ ರೂವಾರಿ ನೆನಪು

ಭಾಸ್ಕರ್‌ರಾವ ಭಾವೆ ಸ್ಮರಣೆ ಇಂದು

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:28 IST
Last Updated 12 ಜೂನ್ 2018, 11:28 IST
ನರಗುಂದದ ವೀರಬಾಬಾಸಾಹೇಬರ ಪುತ್ಥಳಿಗೆ ಸೋಮವಾರ ಬಣ್ಣ ಹಚ್ಚಲಾಗುತ್ತಿದೆ
ನರಗುಂದದ ವೀರಬಾಬಾಸಾಹೇಬರ ಪುತ್ಥಳಿಗೆ ಸೋಮವಾರ ಬಣ್ಣ ಹಚ್ಚಲಾಗುತ್ತಿದೆ   

ನರಗುಂದ: ರೈತ ಬಂಡಾಯದ ಮೂಲಕ ನರಗುಂದ ಪಟ್ಟಣದ ಹೆಸರನ್ನು ಚಿರಸ್ಥಾಯಿಯಾಗಿ ಮಾಡಿದ ಭಾಸ್ಕರ್‌ರಾವ ಭಾವೆ (ಬಾಬಾಸಾಹೇಬ) ಅವರ ಸ್ಮೃತಿ ದಿನವನ್ನು ಇಂದು (ಜೂನ್‌ 12) ಆಚರಿಸಲಾಗುತ್ತಿದೆ.

ತಂದೆ ದಾದಾಜಿರಾವ್‌ ಭಾವೆ ನಿಧನದ ನಂತರ 1842ರಲ್ಲಿ ಭಾಸ್ಕರ್‌ರಾವ್‌ ನರಗುಂದದ ಅಧಿಪತಿಯಾದರು.ನಂತರ ಇದ್ದೊಬ್ಬ ಮಗ ಅಕಾಲಿಕ ಮರಣಕ್ಕೆ ತುತ್ತಾದನು. ಬೇರೆ ಮಗುವನ್ನು ದತ್ತು ಪಡೆಯಲು ಮುಂದಾದರು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷ್ ನೀತಿ ಅಡ್ಡ ಬಂತು. ಇದರ ವಿರುದ್ಧ ಬಂಡಾಯ ಎದ್ದರು. ಬ್ರಿಟಿಷ್‌ ಆಡಳಿತ 1858ರಲ್ಲಿ ನರಗುಂದ ಸಂಸ್ಥಾನಕ್ಕೆ ಒಬ್ಬ ಆಡಳಿತಾಧಿಕಾರಿ ನೇಮಕ ಮಾಡಿತು. ಬ್ರಿಟಿಷರನ್ನು ಸದೆ ಬಡಿಯಲು ಮ್ಯಾನಸನ್‌ ಎಂಬ ಅಧಿಕಾರಿ ಸುರೇಬಾನದ ಹನಮಂತನ ಗುಡಿಯಲ್ಲಿ ಬೀಡುಬಿಟ್ಟನು. ಇದನ್ನರಿತ ಬಾಬಾಸಾಹೇಬ ಮ್ಯಾನಸನ್‌ ನರಗುಂದಕ್ಕೆ ಬರುವವರೆಗೂ ಕಾಯದೇ, ತನ್ನ ಬಂಟ ವಿಷ್ಣು ಕುಲಕರ್ಣಿ ಜತೆ ಸುರೇಬಾನಕ್ಕೆ ತೆರಳಿ ಮ್ಯಾನಸನ್‌ ರುಂಡ ಕತ್ತರಿಸಿ ನರಗುಂದಕ್ಕೆ ತಂದು ಅಗಸಿ ಬಾಗಿಲಿಗೆ ತೂಗು ಹಾಕಿದನು.

ಬ್ರಿಟಿಷರು ಅವರ ವಿರುದ್ಧ ಯುದ್ದ ಸಾರಿದರು.1858ರ ಜೂನ್‌ 2ರಂದು ಬಾಬಾಸಾಹೇಬ ಬಂಧಿಯಾದನು. ಜೂನ್‌ 12ರಂದು ಬೆಳಗಾವಿಯಲ್ಲಿ ಗಲ್ಲಿಗೇರಿಸಲಾಯಿತು. ಅಲ್ಲಿಯೇ ಅವರ ಸಮಾಧಿ ಇದೆ.

ADVERTISEMENT

ಬಾಬಾಸಾಹೇಬರ ಸ್ಮಾರಕಗಳು ಪಟ್ಟಣದಲ್ಲಿ ಸಾಕಷ್ಟಿವೆ. ಐತಿಹಾಸಿಕ ಗುಡ್ಡದ ಮೇಲೆ ಪವನ ವಿದ್ಯುತ್ ಕಂಬಳ ಸ್ಥಾಪನೆಯಿಂದ ಹಲವು ಅವಶೇಷಗಳು ನಾಶವಾಗಿವೆ. ಇರುವ ಸ್ಮಾರಕಗಳ ಸಂರಕ್ಷಣೆ ಆಗಿಲ್ಲ.

ಬಾಬಾಸಾಹೇಬರ ಹೆಸರಿನಲ್ಲಿ ನರಗುಂದ ಉತ್ಸವ ನಡೆಯಬೇಕೆಂಬ ಪಟ್ಟಣದ ನಾಗರಿಕರ, ಸ್ವಾತಂತ್ರ್ಯ ಪ್ರೇಮಿಗಳ ಬೇಡಿಕೆಯೂ ಈಡೇರಿಲ್ಲ.ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು.

ಬಸವರಾಜ ಹಲಕುರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.