ADVERTISEMENT

ನರೇಗಲ್‌ಗೆ ಬಂದ ‘ಚುನಾವಣಾ ಜ್ಯೋತಿ ಯಾತ್ರೆ‘

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 9:07 IST
Last Updated 23 ಏಪ್ರಿಲ್ 2018, 9:07 IST

ನರೇಗಲ್: ಮತದಾನದ ಪ್ರಮಾಣ ಹೆಚ್ಚಿಸಲು, ಮತದಾರರಲ್ಲಿ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೈಗೊಂಡಿದ್ದ ಚುನಾವಣಾ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ ಭಾನುವಾರ ನರೇಗಲ್‌ನಲ್ಲಿ ನಡೆಯಿತು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ಭಾನುವಾರ ನಡೆದ ಯಾತ್ರೆಯ ಸಮಾರೋಪ ಸಮಾರಂಭಕ್ಕ ಎಂದು ಸಮಾಜ ಕಲ್ಯಾಣ ಅಧಿಕಾರಿ ಬಿ.ಆರ್. ಬೇವಿನಮರದ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎನ್ನುವ ಆಶಯ ಹೊಂದಿದೆ. ಹಾಗಾಗಿ, ಜಿಲ್ಲೆಯ ಗ್ರಾಮೀಣ ಮತದಾರರಲ್ಲಿ ಚುನಾವಣೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಚುನಾವಣಾ ಜ್ಯೋತಿ ಯಾತ್ರೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿವಿಧ ಪ್ರದೇಶಗಳಲ್ಲಿ ಸಂಚರಿಸಿರುವ ಜ್ಯೋತಿ ಇಂದು ನರೇಗಲ್ ಪಟ್ಟಣಕ್ಕೆ ಬಂದಿದೆ’ ಎಂದರು.

ADVERTISEMENT

ಮುಖ್ಯಾಧಿಕಾರಿ ಶಂಕರ ಎಸ್. ಹುಲ್ಲಮ್ಮನವರ ಮಾತನಾಡಿ, ‘ಪ್ರಜಾಪ್ರಭುತ್ವವನ್ನು ಭದ್ರಗೊಳಿಸಲು ಶಾಂತಿಯುತ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯಬೇಕು. ಅದರಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ, ಪ್ರಜಾಪ್ರಭುತ್ವದ ಮೌಲ್ಯವನ್ನು ಹೆಚ್ಚಿಸಬೇಕು’ ಎಂದು ಹೇಳಿದರು.

ಚುನಾವಣಾ ಜ್ಯೋತಿ ಯಾತ್ರೆಯು ಗದಗ ರಸ್ತೆ, ಗಣೇಶ ಗುಡಿ, ದರಗಾ, ಹಳೆ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್, ಹೊಸ ಬಸ್ ನಿಲ್ದಾಣದ ಬಿದಿಗಳಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಚಳಗೇರಿ, ಜಿ.ಎಸ್. ಗೋನಾಳ, ತಾಲ್ಲೂಕಾ ಕ್ರೀಡಾಧಿಕಾರಿ ಜೆ.ಎಂ. ಬೂದಿಹಾಳ, ಐ.ಎಸ್. ಹೂಗಾರ, ಜಕ್ಕಲಿ, ನಾಗಪ್ಪ ಮಾರನಬಸರಿ, ಶೇಖಪ್ಪ ಹೊನವಾಡ ಹಾಗೂ ಮಹಾದೇವ ಮ್ಯಾಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.