ADVERTISEMENT

ಪುರಸಭೆಗೆ 18.59ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 6:30 IST
Last Updated 16 ಅಕ್ಟೋಬರ್ 2012, 6:30 IST

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಗೆ ಸರ್ಕಾರದಿಂದ 2008-09ರಿಂದ 2012-13ವರೆಗೆ ಒಟ್ಟು 18 ಕೋಟಿ 59 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಆಗಿದೆ ಎಂದು ಶಾಸಕ ರಾಮಣ್ಣ ಲಮಾಣಿ ತಿಳಿಸಿದರು.

ಈ ಕುರಿತು  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದಿಂದ ಬಿಡುಗಡೆ ಆಗಿರುವ ಅನುದಾನದ ಕುರಿತು ಅಂಕಿ ಅಂಶಗಳ ಸಹಿತ ವಿವರ ನೀಡಿದರು. 

2008-09ನೇ ಸಾಲಿನಲ್ಲಿ 12ನೇ ಹಣಕಾಸು ಮುಕ್ತನಿಧಿ, 12ನೇ ಹಣಕಾಸು ರಸ್ತೆ ಮತ್ತು ಸೇತುವೆ ಅಭಿವೃದ್ಧಿ, ವಿಶೇಷ ಅಭಿವೃದ್ಧಿ ಅನುದಾನ ಸೇರಿದಂತೆ 63.38 ಲಕ್ಷ, 2009-10ನೇ ಸಾಲಿಗಾಗಿ 12ನೇ ಹಣಕಾಸು ಮುಕ್ತನಿಧಿ, 12ನೇ ಹಣಕಾಸು ರಸ್ತೆ ಮತ್ತು ಅಭಿವೃದ್ಧಿ, 12ನೇ ಹಣಕಾಸು ಡಾಟಾ ಬೇಸ್ ಯೋಜನೆಯಡಿ 22.10 ಲಕ್ಷ ಹಾಗೂ 2008ರಿಂದ 2010ರಲ್ಲಿ 12ನೇ ಹಣಕಾಸು ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಒಟ್ಟು 35.50 ಲಕ್ಷ ರೂಪಾಯಿ ಬಿಡುಗಡೆ ಆಗಿದೆ.

ಅದರಂತೆ 2009-10ರಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯಡಿ 2 ಕೋಟಿ, 2010-11ಹಾಗೂ 2011-12ನೇ ಸಾಲಿನಲ್ಲಿ 13ನೇ ಹಣಕಾಸು ಬೇಸಿಕ್ ಗ್ರ್ಯಾಂಟ್ 111.56 ಲಕ್ಷ ಬಿಡುಗಡೆ ಆಗಿದ್ದರೆ 2008-09ರಿಂದ 2010-11ರಲ್ಲಿ ಎಸ್‌ಎಫ್‌ಸಿ ಯೋಜನೆಯಡಿ ಸರ್ಕಾರ ಒಟ್ಟು 848.63 ಲಕ್ಷ ಹಾಗೂ 2010-11ರಲ್ಲಿ ಎಸ್‌ಎಫ್‌ಸಿ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 9.50 ಲಕ್ಷ ಅನುದಾನ ನೀಡಿದೆ.    ಅಲ್ಲದೆ 2011-12 ಮತ್ತು 2012-13ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಡಿ 537.10 ಲಕ್ಷ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 10.00 ಲಕ್ಷ ರೂಪಾಯಿ ಅನುದಾನವನ್ನು ಸರ್ಕಾರ ಒದಗಿಸಿದ್ದು ಇದರ ಜೊತೆಗೆ 2012-13ನೇ ಸಾಲಿನಲ್ಲಿ ಬರಗಾಲ ಪರಿಹಾರ ಯೋಜನೆಯಡಿ 7.31 ಲಕ್ಷ ರೂಪಾಯಿ ಪುರಸಭೆಗೆ ನೀಡಿದೆ.

ಸರ್ಕಾರ ಪಟ್ಟಣದ ಪ್ರಗತಿಗಾಗಿ ಕೋಟ್ಯಂತರ ಹಣ ಅನುದಾನ ನೀಡಿದ್ದರೂ ಕೂಡ ಪುರಸಭೆ ಸದಸ್ಯರು ಮಾತ್ರ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಲಮಾಣಿ ವಿಷಾದಿಸಿದರು.

ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಬಂದಿದ್ದರೂ ಪಟ್ಟಣದಲ್ಲಿ ಹೇಳಿಕೊಳ್ಳುವಂಥ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ನಾಮ ನಿರ್ದೇಶಿತ ಸದಸ್ಯ ಸೋಮಣ್ಣ ಮುಳಗುಂದ, ಚೆಂಬಣ್ಣ ಬಾಳಿಕಾಯಿ, ಸತೀಶ ಮೆಕ್ಕಿ, ನಾಗರಾಜ ಚಿಂಚಲಿ, ಉಮೇಶ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.