ADVERTISEMENT

ಪೆಂಡರ ಗಲ್ಲಿಯಲ್ಲಿ ಸಂಚಾರ ಸಂಕಟ

ವಾರ್ಡ್ ನಂಬರ್ 7ರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ರಸ್ತೆಗಳ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 12:29 IST
Last Updated 19 ಜೂನ್ 2018, 12:29 IST
ಸಂಪೂರ್ಣ ಹದಗೆಟ್ಟಿರುವ 7ನೇ ವಾರ್ಡ್‌ನ ರಸ್ತೆ
ಸಂಪೂರ್ಣ ಹದಗೆಟ್ಟಿರುವ 7ನೇ ವಾರ್ಡ್‌ನ ರಸ್ತೆ   

ಗದಗ: ಕುಡಿಯುವ ನೀರಿನ ಯೋಜನೆಗಾಗಿ ಮನ ಬಂದಂತೆ ಎಲ್ಲೆಡೆ ರಸ್ತೆ ಅಗೆದು ಹಾಕಿರುವುದರಿಂದ ಮಳೆಯಾದರೆ ರಸ್ತೆ ಕೆಸರುಗದ್ದೆಯಾಗಿ ಬದಲಾಗುತ್ತದೆ. ಎಲ್ಲ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಜನರು ಮನೆಯಿಂದ ಹೊರಬೀಳಲು ಭಯ ಪಡುತ್ತಿದ್ದಾರೆ. ಇದು ಬೆಟಗೇರಿಯ ತೆಂಗಿನಕಾಯಿ ಬಜಾರ, ಮುಳಗುಂದರ ಓಣಿ, ಪೆಂಡರ ಗಲ್ಲಿ, ಬೆಲೇರಿ ಓಣಿ, ಹಬೀಬ ಗಲ್ಲಿಯ ರಸ್ತೆಗಳ ದುಸ್ಥಿತಿ.

ಈ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಿ ಹಲವು ದಶಕಗಳೇ ಕಳೆದಿವೆ. ತ್ಯಾಜ್ಯ ವಿಲೇವಾರಿ, ಚರಂಡಿ ಸ್ವಚ್ಛತೆಯೂ ದೂರ ಮಾತಾಗಿದೆ. ವಾರ್ಡ್ ನಂಬರ್ 7ರ ವ್ಯಾಪ್ತಿಗೆ ಬರುವ ಬೆಟಗೇರಿಯ ತೆಂಗಿನಕಾಯಿ ಬಜಾರ, ಮುಳಗುಂದ ಓಣಿ, ಪೆಂಡರ ಗಲ್ಲಿ, ಬೆಲೇರಿ ಓಣಿ, ಹುಚ್ಚನಗೌಡ್ರ ಓಣಿ, ಚನ್ನನಗೌಡ್ರ ಓಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಕಾಮಗಾರಿಗಾಗಿ ರಸ್ತೆ ಅಗೆದು, ನಂತರ ಸಮತಟ್ಟು ಮಾಡದೇ ಹಾಗೆ ಬಿಡಲಾಗಿದೆ. ಇದರಿಂದ ಪಾದಚಾರಿಗಳ ಹಾಗೂ ವಾಹನ ಸವಾರರರಿಗೆ ತೀವ್ರ ತೊಂದರೆಯಾಗಿದೆ.

ನಗರೋತ್ಥಾನ ಯೋಜನೆಯಡಿ ಇಲ್ಲಿನ ಬಡವಾಣೆಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ನಗರಸಭೆ ಯೋಜನೆ ಹಾಕಿಕೊಂಡಿದೆ. ಈ ಯೋಜನೆಯ ಕಾಮಗಾರಿ ಕಾರ್ಯ ಆರಂಭವಾಗಿಲ್ಲ. ಒಳಚರಂಡಿ ನಿರ್ಮಾಣ ಕಾಮಗಾರಿಗೂ ಚಾಲನೆ ದೊರೆತಿಲ್ಲ.

ADVERTISEMENT

‘24x7 ಕುಡಿಯುವ ನೀರಿನ ಯೋಜನೆ ಕಾಮಗಾರಿ ನಂತರ ಗುಂಡಿಗಳನ್ನು ಮುಚ್ಚಿಲ್ಲ. ಮಳೆಯಾದರೆ ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ’ ಎಂದು ನಿವಾಸಿ ರಮೇಶಕುಮಾರ ಪಾಟೀಲ, ಶ್ರೀಪಾದ ಬೆಳಮಕರ, ಚೇತನಕುಮಾರ ಬಡಾವಣೆಯ ಅವ್ಯವಸ್ಥೆ ತೆರೆದಿಟ್ಟರು.

`ಮೊದಲು ಈ ಪ್ರದೇಶದಲ್ಲಿ ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಕಸ ವಿಲೇವಾರಿ ಹಾಗೂ ಚರಂಡಿ ಸ್ವಚ್ಛತಾ ಕಾರ್ಯದ ಬಗ್ಗೆ ನಗರಸಭೆ ಕ್ರಮ ವಹಿಸಬೇಕು' ಎಂದು ಬೆಲೇರಿ ಓಣಿಯ ಮಹೇಶ ಗೌಡರ ಒತ್ತಾಯಿಸಿದರು.

ತೆಂಗಿನಕಾಯಿ ಬಜಾರ, ಪೆಂಡರ ಗಲ್ಲಿ, ಮುಳಗುಂದ ಓಣಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗುತ್ತಿಗೆದಾರರು ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದಾರೆ. ಈ ಕುರಿತು ದೂರು ನೀಡಿದ್ದೇವೆ
ರಾಘವೇಂದ್ರ ಯಳವತ್ತಿ, ವಾರ್ಡ್‌ ಸದಸ್ಯ

ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.