ADVERTISEMENT

ಪೊಲೀಸ್‌ ಒನ್‌ ತಂತ್ರಾಂಶ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 8:10 IST
Last Updated 5 ಅಕ್ಟೋಬರ್ 2017, 8:10 IST

ಗದಗ: ‘ಪೊಲೀಸರ ನಡುವಿನ ಆಂತರಿಕ ಸಂವಹನಕ್ಕಾಗಿ ಅಭಿವೃದ್ಧಿಪಡಿಸಲಾದ ‘ಪೊಲೀಸ್‌ ಒನ್‌’ ತಂತ್ರಾಂಶವನ್ನು ಉತ್ತರ ವಲಯ ಐಜಿಪಿ ಡಾ.ಕೆ.ರಾಮಚಂದ್ರರಾವ್ ಗದಗ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ಬಿಡುಗಡೆ ಮಾಡಿದರು.

‘ಅಪರಾಧ ಪ್ರಕರಣಗಳ ವಿಶ್ಲೇಷಣೆ, ಸಾಕ್ಷ್ಯ ಸಂಗ್ರಹದಲ್ಲೂ ಈ ಅಪ್ಲಿಕೇಷನ್‌ ನಿರ್ಣಾಯಕ ಪಾತ್ರ ವಹಿಸಲಿದ್ದು, ಶೀಘ್ರದಲ್ಲೇ ಉತ್ತರ ವಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇದನ್ನು ಬಳಕೆಗೆ ಮುಕ್ತಗೊಳಿಸಲಾಗುವುದು. ಇದು ಇಲಾಖೆ ಬಳಕೆಗೆ ಮಾತ್ರ’ ಎಂದು ಐಜಿಪಿ ಅಭಿಪ್ರಾಯಪಟ್ಟರು.

ಮಹದಾಯಿ, ಕಳಸಾ-ಬಂಡೂರಿ ಹೋರಾಟಕ್ಕೆ ಸಂಬಂಧಿಸಿ ಜಿಲ್ಲೆಯ ರೈತರ ಮೇಲಿನ 18 ಪ್ರಕರಣಗಳ ಬಗ್ಗೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿದ್ದು, ಅವುಗಳನ್ನು ಹಿಂಪಡೆಯುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಇದಕ್ಕೂ ಮುನ್ನ ಅವರು, ಗದಗ ಹಳೆಯ ಬಸ್ ನಿಲ್ದಾಣ ಎದುರಿಗೆ ಜನೌಷಧ ಕೇಂದ್ರ ಹಾಗೂ ಬೆಟಗೇರಿಯ ಪೊಲೀಸ್‌ ಕ್ವಾಟರ್ಸ್‌ನಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.

‘ನಗರದ ಜನೌಷದ ಕೇಂದ್ರ ವನ್ನು ಪೊಲೀಸರೇ ನಿರ್ವಹಣೆ ಮಾಡಲಿದ್ದಾರೆ ಎನ್ನುವುದು ವಿಶೇಷ. ಇಲಾಖೆಯಲ್ಲಿ ಬಿ–ಫಾರ್ಮ್‌ ವಿದ್ಯಾರ್ಹತೆ ಹೊಂದಿರುವ ಸಿಬ್ಬಂದಿ ಇದ್ದು, ಅವರನ್ನು ಜೌಷಧ ಮಳಿಗೆಗೆ ನಿಯೋಜಿಸಲಾಗುವುದು. ಖಾಸಗಿ ಜೌಷಧಿ ಮಳಿಗೆಗಳಗೆ ಹೋಲಿಸಿದರೆ ಇಲ್ಲಿ ಶೇ 40ರಿಂದ 50ರಷ್ಟು ಕಡಿಮೆ ದರದಲ್ಲಿ ಜೌಷಧ ಲಭಿಸುತ್ತದೆ. ಕೇಂದ್ರವು 24x7 ಮಾದರಿಯಲ್ಲಿ ಸೇವೆ ಒದಗಿಸಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷಬಾಬು ಹೇಳಿದರು.

ಜಿಲ್ಲಾ ಪಂಚಾಯತಿ ಸಿಇಒ ಮಂಜುನಾಥ ಚೌಹಾಣ, ಡಿಎಫ್‍ಒ ಯಶಪಾಲ ಕ್ಷೀರಸಾಗರ, ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಿ.ಎಚ್. ಕಬಾಡಿ ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.