ADVERTISEMENT

ಪೋಲಾಗುತ್ತಿರುವ ತುಂಗಭದ್ರಾ ನೀರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 10:45 IST
Last Updated 1 ಜೂನ್ 2013, 10:45 IST

ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ಬಾಳೆಹೊಸೂರು, ಸೂರಣಗಿ, ದೊಡ್ಡೂರು, ಶಿಗ್ಲಿ, ಮುನಿಯನ ತಾಂಡಾ, ಅಡರಕಟ್ಟಿ ಗ್ರಾಮಗಳ ಸಾವಿರಾರು ಜನರಿಗೆ ಕುಡಿಯುವ ನೀರು ಪೂರೈಸುತ್ತಿರುವ ಮೇವುಂಡಿ ತುಂಗಭದ್ರಾ ನದಿ ನೀರಿನ ಪೈಪ್‌ಲೈನ್ ರಕ್ಷಣೆಗಾಗಿ ಅಳವಡಿಸಿರುವ ಚೆಂಬರ್‌ಗಳು ಅಲ್ಲಲ್ಲಿ ಒಡೆದಿದ್ದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಚರಂಡಿ ಸೇರುತ್ತಿದೆ. ಪಟ್ಟಣದಿಂದ ಅಂದಾಜು ಅಂದಾಜು 45 ಕಿಮೀ ದೂರದ ಮೇವುಂಡಿ ಹತ್ತಿರ ಅಳವಡಿಸಲಾಗಿರುವ ಜಾಕ್‌ವೆಲ್‌ನಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಜವಾಬ್ದಾರಿ ಪುರಸಭೆ ಮೇಲಿದೆ.

ಆದರೆ ಅದರ ನಿರ್ಲಕ್ಷ ಧೋರಣೆಯಿಂದಾಗಿ ಇದೀಗ ನೀರು ಪೂರೈಸುತ್ತಿರುವ ವಾಲ್ವ್‌ಗಳು ಬಹಳ ಕಡೆಗಳಲ್ಲಿ ಒಡೆದಿದ್ದು ನಿತ್ಯ ಸಾಕಷ್ಟು ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ಬಾಳೇಹೊಸೂರು, ಸೂರಣಗಿ ಗ್ರಾಮಗಳಲ್ಲಿ ಒಡೆದ ಚೆಂಬರ್‌ನಲ್ಲಿ ಇಳಿದು ಗ್ರಾಮಸ್ಥರು ದಿನವೂ ನೀರು ತುಂಬುತ್ತಿದ್ದಾರೆ. ಪಟ್ಟಣಕ್ಕೆ ನದಿ ನೀರು ಬಂದ ಮೇಲೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಯಿತು ಎಂದು ಲಕ್ಷ್ಮೇಶ್ವರದ ಜನರು ಕನಸು ಕಂಡಿದ್ದರು. ಆದರೆ ಇದೀಗ ವ್ಯರ್ಥವಾಗಿ ನೀರು ಪೋಲಾಗುತ್ತಿರುವುದನ್ನು ಗಮನಿಸಿದಾಗ ಯಾವ ಹಂತದಲ್ಲಾದರೂ ಈ ಯೋಜನೆ ಬಂದ್ ಆಗುವ ಲಕ್ಷಣಗಳು ಗೋಚರಿಸುತ್ತಿದ್ದು ಪುರಸಭೆ ಆಡಳಿತ ಮಂಡಳಿ ತಕ್ಷಣ ಇತ್ತ ಗಮನ ಹರಿಸಿ ಪೋಲಾಗುತ್ತಿರುವ ನೀರನ್ನು ತಡೆಗಟ್ಟಿ ನೀರಿನ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.