ADVERTISEMENT

ಬರದ ನಾಡಲ್ಲಿ ಜ್ಯೂಸ್‌ವಾಲ್‌ಗಳು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:29 IST
Last Updated 17 ಡಿಸೆಂಬರ್ 2012, 6:29 IST
ಗದುಗಿನ ರಸ್ತೆಯೊಂದರಲ್ಲಿ ಹಣ್ಣಿನ ಜ್ಯೂಸ್ ವ್ಯಾಪಾರ ಮಾಡುತ್ತಿರುವ ಉತ್ತರ ಪ್ರದೇಶದ ಜ್ಯೂಸ್‌ವಾಲ್.
ಗದುಗಿನ ರಸ್ತೆಯೊಂದರಲ್ಲಿ ಹಣ್ಣಿನ ಜ್ಯೂಸ್ ವ್ಯಾಪಾರ ಮಾಡುತ್ತಿರುವ ಉತ್ತರ ಪ್ರದೇಶದ ಜ್ಯೂಸ್‌ವಾಲ್.   

ಗದಗ: ನಗರದ ಪ್ರಮುಖ ರಸ್ತೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಾದು ಹೋಗುವಾಗ ಬಣ್ಣ ಬಣ್ಣದ ಛತ್ರಿಗಳಡಿ ತಳ್ಳುವ ಗಾಡಿಗಳನ್ನು ನೋಡಿರುತ್ತೀರಿ. ಇವರು ಯಾರು ಅಂದುಕೊಂಡಿರಾ? ಎಲ್ಲಿಂದ ಬಂದಿರಬಹುದೆಂಬ ಕುತೂಹಲ ಇದ್ದೇ ಇರುತ್ತದೆ. ಇವರು ಉತ್ತರ ಪ್ರದೇಶದಿಂದ ಹೊಟ್ಟೆ ಪಾಡಿಗಾಗಿ ಗದುಗಿಗೆ ಬಂದಿರುವ ಜ್ಯೂಸ್‌ವಾಲ್‌ಗಳು.

ನಗರದ ಫುಟ್‌ಪಾತ್‌ಗಳಲ್ಲಿ ಪಾನಿಪುರಿ, ಮಸಾಲೆಪುರಿ, ಮಿರ್ಚಿ, ಚುರ್‌ಮುರಿಯಂತೆ ಹಣ್ಣಿನ ಜ್ಯೂಸ್‌ಗಳು ಲಭ್ಯ. ಅನಾನಸ್ ಮತ್ತು ಮೋಸಂಬಿ ಹಣ್ಣಿನ ರಸಗಳು ನಗರದ ವಿವಿಧೆಡೆಯ ಹಾದಿಬದಿಯಲ್ಲಿ ಜನ ಸಾಮಾನ್ಯರ ದಣಿವನ್ನು ನಿವಾರಿಸುತ್ತಿವೆ.

ಈಗ ಚಳಿಗಾಲವಾದರೂ ಜಿಲ್ಲೆಯ ಜನತೆಗೆ ಬೇಸಿಗೆ ವಾತಾವರಣ. ಸತತ ಎರಡನೇ ವರ್ಷವೂ ಜಿಲ್ಲೆಯಲ್ಲಿ ಬರಗಾಲ ಇದಕ್ಕೆ ಕಾರಣ. ಬಣ್ಣಬಣ್ಣದ ದೊಡ್ಡ ಛತ್ರಿಗಳಡಿ ತಳ್ಳುವ ಗಾಡಿಯಲ್ಲಿ ನಗರದ ಪಾಲಾ ಬಾದಾಮಿ ರಸ್ತೆ, ಕೆ.ಸಿ.ರಾಣಿ, ಡಿ.ಜಿ.ಎಂ. ಆಯುರ್ವೇದ ಕಾಲೇಜು ಬಳಿ, ಬೇಟಗೆರಿ ತೆಂಗಿನಕಾಯಿ ಬಜಾರ್, ಹುಬ್ಬಳ್ಳಿ ರಸ್ತೆ ಸೇರಿದಂತೆ ನಗರದ ಬಹುತೇಕ ಫುಟ್‌ಪಾತ್‌ಗಳಲ್ಲಿ ಉತ್ತರ ಪ್ರದೇಶದ ಜ್ಯೂಸ್‌ವಾಲಗಳೇ ಕಾಣಸಿಗುತ್ತಾರೆ.

ಈ ಜ್ಯೂಸ್‌ವಾಲಗಳು ಅನಾನಸ್ ಮತ್ತು ಮೋಸಂಬಿಯಿಂದ ತಯಾರಿಸಿದ ಸವಿಯಾದ ಹಣ್ಣಿನ ರಸ ನೀಡುತ್ತಾರೆ. ಹೊಟ್ಟೆ ಪಾಡಿಗಾಗಿ ಲಕ್ನೋದ ರಾಜಪುರ ಗ್ರಾಮದಿಂದ ಹತ್ತು ಮಂದಿ ಗದುಗಿಗೆ ಬಂದಿದ್ದಾರೆ. ಜತೆಯಲ್ಲಿ ಜ್ಯೂಸ್ ತಯಾರಿಸುವ ಯಂತ್ರವನ್ನು ತೆಗೆದುಕೊಂಡು ಬಂದಿದ್ದಾರೆ.

ಆದರೆ ಹಣ್ಣುಗಳನ್ನು ಮಾತ್ರ ನಗರದ ಮಾರುಕಟ್ಟೆಯಲ್ಲಿಯೇ ಖರೀದಿಸುತ್ತಾರೆ. ಯಂತ್ರದ ನೆರವಿನಿಂದ ಮೋಸಂಬಿ ಮತ್ತು ಅನಾನಸ್ ಹಣ್ಣಿನ ರಸವನ್ನು ಮುಂದಿಡುತ್ತಾರೆ.  ಬೇರೆ ಜ್ಯೂಸ್ ಪಾರ್ಲರ್‌ಗಳಲ್ಲಿ ಮಾರಾಟ ಮಾಡುವ ಹಣ್ಣಿನ ರಸಕ್ಕೂ ಕಡಿಮೆ ಏನಿಲ್ಲ. ಒಂದು ಗ್ಲಾಸ್ ರಸಕ್ಕೆ ರೂ. 15. ಐಸ್ ಇಲ್ಲದ ಜ್ಯೂಸ್‌ಗೆ ರೂ.20.

ಹಿಂದಿ ಬಿಟ್ಟು ಬೇರೆ ಭಾಷೆ ಇವರಿಗೆ ಬರುವುದಿಲ್ಲ. ಅಲ್ಪ ಸ್ವಲ್ಪ ಬರುವ ಕನ್ನಡ ಭಾಷೆಯಲ್ಲಿಯೇ ಗ್ರಾಹಕರನ್ನು ಮಾತನಾಡಿಸಿಕೊಂಡು ತಣ್ಣನೆ ಜ್ಯೂಸ್ ಕೊಡುತ್ತಾರೆ. ಸೀಸನ್‌ಗೆ ತಕ್ಕಂತೆ ಹಣ್ಣಿನ ವ್ಯಾಪಾರ ಮಾಡುವುದು ಇವರ ಉದ್ಯೋಗ. ನಗರದಲ್ಲಿ ಕೊಠಡಿ ಬಾಡಿಗೆ ಪಡೆದು ಅಲ್ಲಿ ವಾಸ ಮಾಡುತ್ತಾರೆ.

ಜ್ಯೂಸ್‌ವಾಲ್‌ಗಳು ಏನು ಹೇಳುತ್ತಾರೆ...
`ಮಳೆ ಬಿದ್ದಾಗ ಬಿತ್ತನೆ ಮಾಡುತ್ತೇವೆ. ಕೆಲಸ ಇಲ್ಲದೆ ಇದ್ದಾಗ ಲಕ್ನೋದಿಂದ ವ್ಯಾಪಾರ ಮಾಡಲು ಇಲ್ಲಿಗೆ ಬಂದಿದ್ದೇವೆ. ನಮ್ಮವರು ಜಿಲ್ಲೆಯ ಬೇರೆ ಬೇರೆ ಕಡೆ ಜ್ಯೂಸ್ ಮಾರಾಟ ಮಾಡುತ್ತಾರೆ. ಯಂತ್ರಕ್ಕೆ ರೂ. 3 ಸಾವಿರ. ದಿನಕ್ಕೆ ರೂ. 500ರಿಂದ ರೂ. 600 ವ್ಯಾಪಾರ. ಅನಾನಸ್‌ನಿಂದ ನಾಲ್ಕು ಗ್ಲಾಸ್ ಜ್ಯೂಸ್ ಮಾಡಬಹುದು' ಎನ್ನುತ್ತಾರೆ ಜ್ಯೂಸ್‌ವಾಲ್‌ಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT