ADVERTISEMENT

ಬಸವಣ್ಣನ ಅಂಕಿತ ಲೋಪಗೊಳಿಸಿದ ಮಾತೆ ಮಹಾದೇವಿ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 6:04 IST
Last Updated 10 ಅಕ್ಟೋಬರ್ 2017, 6:04 IST

ಮುಂಡರಗಿ: ‘ಮುರಘಾ ಮಠದ ಪೀಠಾಧಿಪತಿಯಾಗುವ ಅವಕಾಶ ಕೈತಪ್ಪಿದ್ದರಿಂದ ನಿರಾಶಗೊಂಡ ಹಾನಗಲ್ ಕುಮಾರ ಸ್ವಾಮೀಜಿ 1904ರಲ್ಲಿ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಆ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಿದರು ಎಂದು ಹೇಳಿಕೆ ನೀಡುವ ಮೂಲಕ ಮಾತೆ ಮಹಾದೇವಿ ಅವರು ಉದ್ಧಟತನ ಪ್ರದರ್ಶಿಸಿದ್ದಾರೆ’ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದ್ದಾರೆ.

‘ಹಾನಗಲ್ ಕುಮಾರ ಸ್ವಾಮೀಜಿ ಯಾವ ಮಠದ ಅಧಿಕಾರ ಬಯಸಿದವರಲ್ಲ. ಕೇವಲ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಮುರುಘಾ ಪೀಠವನ್ನು ಬಯಸಿದ್ದರು ಎಂದು ಹೇಳುವುದು ಅಕ್ಷಮ್ಯ. ಆದ್ದರಿಂದ ಮಾತೆ ಮಹಾದೇವಿ ಅವರು ಹಾನಗಲ್‌ ಕುಮಾರ ಸ್ವಾಮೀಜಿಯ ಭಕ್ತ ಸಮೂಹ, ಅಭಿಮಾನಿಗಳಲ್ಲಿ ಕ್ಷಮೆ ಕೋರಬೇಕು’ ಎಂದು ಅವರು ಪ್ರತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

‘ಅವರು ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಆದರೆ, ಯಾವ ಅಧಿಕಾರ ಬಯಸಲಿಲ್ಲ. ಸಭೆಯೊಂದರಲ್ಲಿ ಒಂದೇ ಆಸನವಿದ್ದ ಸಂದರ್ಭದಲ್ಲಿ ತಮ್ಮ ಜತೆಗಿದ್ದ ಶ್ರೀಗಳನ್ನು ಆಸನದ ಮೇಲೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ತಾವು ನೆಲದ ಮೇಲೆ ಕುಳಿತುಕೊಂಡರು. ಚಿತ್ತರಗಿ ಮಹಾಂತಜ್ಜನ ದರ್ಶನಕ್ಕೆ ಬಂದಾಗ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೆ ಪಾದಚಾರಿಯಾಗಿ ಮಠಕ್ಕೆ ಬಂದಿದ್ದರು. ಇದು ಅವರ ಕಿಂಕರ ಭಾವವನ್ನು ತೋರಿಸುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಮಾತೆ ಮಹಾದೇವಿ ಬಸವಣ್ಣನ ಅಂಕಿತವನ್ನು ಲೋಪಗೊಳಿಸಿದ ಪಾತಕಿ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಮೇಲಾದರೂ ಲಿಂಗದೇವ ಅಂಕಿತದ ಕೃತಿಗಳನ್ನು ಸುಟ್ಟು ಹಾಕಲಿ. ಕೇವಲ ಕೆಲವು ವಚನಗಳಲ್ಲಿ ಬಂದ ಲಿಂಗಾಯತ ಪದಕ್ಕೆ ಜೋತು ಬೀಳುವುದಕ್ಕಿಂತ ಶರಣರ ನೂರಾರು ವಚನಗಳಲ್ಲಿ ಪ್ರಸ್ತಾಪಿಸಲಾಗಿರುವ ‘ವೀರಶೈವ’ ಪದವನ್ನು ಅರ್ಥೈಸಿಕೊಳ್ಳಲಿ. ಲಿಂಗಾಯತ ಪದದ ಸೀಮಿತಾರ್ಥವನ್ನು ತಿಳಿದುಕೊಂಡು ಲಿಂಗಾಯತ ಹಾಗೂ ವೀರಶೈವ ಎರಡು ಒಂದೇ ಎಂದು ಭಾವಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.