ADVERTISEMENT

ಬಸ್‌ತಂಗುದಾಣ: ಅವ್ಯವಸ್ಥೆ ಆಗರ

ಕೆ.ಎಸ್.ಸುನಿಲ್
Published 18 ಫೆಬ್ರುವರಿ 2013, 9:54 IST
Last Updated 18 ಫೆಬ್ರುವರಿ 2013, 9:54 IST
ಗದಗ-ಬೆಟಗೇರಿಯ ಗಾಂಧಿನಗರ ಕ್ರೀಡಾಂಗಣದ ಎದುರಿನ ಬಸ್‌ತಂಗುದಾಣ ಅವ್ಯವಸ್ಥೆ ಆಗರವಾಗಿದೆ.
ಗದಗ-ಬೆಟಗೇರಿಯ ಗಾಂಧಿನಗರ ಕ್ರೀಡಾಂಗಣದ ಎದುರಿನ ಬಸ್‌ತಂಗುದಾಣ ಅವ್ಯವಸ್ಥೆ ಆಗರವಾಗಿದೆ.   

ಗದಗ: ಬಿಸಿಲು, ಮಳೆ, ಚಳಿ, ಬಿರುಗಾಳಿ ಏನೇ ಬರಲಿ ಅವಳಿ ನಗರದ ಜನತೆಯ ಪಾಲಿಗೆ ಬಸ್ ತಂಗುದಾಣಗಳು ಇದ್ದರೂ ಇಲ್ಲದಂತೆ.

ಗದಗ-ಬೆಟಗೇರಿಯಲ್ಲಿ ಇರುವ ಬೆರಳಣಿಕೆಯಷ್ಟು ಬಸ್ ತಂಗುದಾಣಗಳು ಸಹ ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾಗಿವೆ. ತಂಗುದಾಣಗಳಲ್ಲಿ ಕುಳಿತುಕೊಳ್ಳಲು ಹಾಕಲಾಗಿದ್ದ ಕಲ್ಲುಗಳು ನಾಪತ್ತೆ,  ಬಿರುಕು ಬಿಟ್ಟ ಗೋಡೆಗಳು, ನೆಲಕ್ಕೆ ಹಾಕಲಾಗಿದ್ದ ಸಿಮೆಂಟ್ ಗಾರೆ ಪುಡಿ ಪುಡಿ, ಮುಳ್ಳು ಮತ್ತು ಕಸದ ರಾಶಿ..ಹೀಗೆ ತಂಗುದಾಣ ಅವ್ಯವಸ್ಥೆಯ ಆಗರವಾಗಿದೆ.

ದೂರದ ಊರಿಗೆ ಹೋಗಬೇಕಾದವರು ಬಿಸಿಲು, ಮಳೆಯನ್ನೂ ಲೆಕ್ಕಿಸದೆ ಗಂಟೆಗಟ್ಟಲೇ ಬಸ್‌ಗಾಗಿ ಕಾಯ
ಬೇಕು. ಇರುವ ತಂಗುದಾಣದಲ್ಲಿ ವಿಶ್ರಾಂತಿ ಪಡೆಯಬೇಕಾದರೆ ಅವು ಸಹ ಸರಿಯಿಲ್ಲ. ರೋಟರಿ, ಲಯನ್ಸ್ ಸಂಸ್ಥೆ ವತಿಯಿಂದ ನಿರ್ಮಿಸಿದ ತಂಗುದಾಣಗಳು ಬಿಟ್ಟರೆ ನಗರದಲ್ಲಿ ನಗರಸಭೆಯಾಗಲಿ, ಶಾಸಕ ಮತ್ತು ಸಂಸದರ ಅನುದಾನದಿಂದಾಗಲಿ ಯಾವುದೇ ತಂಗುದಾಣ ನಿರ್ಮಿಸಿಲ್ಲ.

ಮುಳಗುಂದ ನಾಕಾ, ಪಂಚರ ಹೊಂಡ, ಪಾಲಾ ಬದಾಮಿ ರಸ್ತೆಯ ಗಾಂಧೀ ನಗರ, ಹಳೇ ಡಿಸಿ ಕಚೇರಿ, ಬೆಟಗೇರಿಯ ಅಂಬಾಭವಾನಿ ಸರ್ಕಲ್ ಬಳಿಯ ತಂಗುದಾಣ ಹೊರತು ಪಡಿಸಿದರೆ ಜನನಿಬಿಡ ಪ್ರದೇಶದವಾದ ಗಾಂಧಿ ವೃತ್ತ, ರೋಟರಿ ಸರ್ಕಲ್, ಮಾಳಶೆಟ್ಟಿ ವೃತ್ತದ ಬಳಿ ತಂಗುದಾಣಗಳೇ ಇಲ್ಲ. ಹೆಲ್ತ್ ಕ್ಯಾಂಪ್‌ನಲ್ಲಿದ್ದ ಬಸ್‌ಶೆಲ್ಟರ್ ಅನ್ನು ರಸ್ತೆ ನಿರ್ಮಾಣದ ನೆಪದಲ್ಲಿ ಧ್ವಂಸಗೊಳಿಸಲಾಯಿತು.

ನಗರದ ಸುತ್ತಮುತ್ತಲ ಗ್ರಾಮಗಳಲ್ಲದೇ, ತಾಲ್ಲೂಕು ಕೇಂದ್ರಗಳಿಂದಲ್ಲೂ ಸಾವಿರಾರು ಜನರು ಅಗತ್ಯವಸ್ತುಗಳ ಖರೀದಿಗೆ ಪ್ರತಿದಿನ ಜಿಲ್ಲಾ ಕೇಂದ್ರಕ್ಕೆ ಆಗಮಿಸುತ್ತಾರೆ.  ಮರಳಿ ಊರಿಗೆ ಹೋಗಬೇಕಾದರೆ ಲಗೇಜ್‌ನೊಂದಿಗೆ ಮಕ್ಕಳು, ಮಹಿಳೆಯರು, ವೃದ್ಧರು ಫುಟ್‌ಪಾತ್‌ನಲ್ಲಿ ಸುಡು ಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯಬೇಕು. ಅಗತ್ಯವಿರುವ ಕಡೆ ಬಸ್ ಶೆಲ್ಟರ್ ನಿರ್ಮಿಸಬೇಕು ಎಂಬ ಹಲವು ವರ್ಷಗಳ ಸಾರ್ವಜನಿಕರ ಕೂಗು ಸಂಬಂಧಪಟ್ಟವರಿಗೆ ಇನ್ನೂ ಕೇಳಿಲ್ಲ.

ತಂಗುದಾಣಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ರಾತ್ರಿ ವೇಳೆ ಕುಡುಕರು ಮತ್ತು ಪುಂಡರ ಹಾವಳಿ. ಜೂಜಾಟ, ಮದ್ಯ ಸೇವನೆಗೆ ಬಳಸಿಕೊಳ್ಳಲಾಗುತ್ತಿದೆ. ಕಟ್ಟಿಗೆ ತಂದು ಅಡುಗೆ ಮಾಡಿರುವ ಉದಾಹರಣೆಯೂ ಉಂಟು.

`ಬಸ್ ಶೆಲ್ಟರ್ ಇಲ್ಲದೆ ಬಿಸಿಲಿನಲ್ಲಿಯೇ ಫುಟ್‌ಪಾತ್‌ನಲ್ಲಿ ನಿಂತುಕೊಂಡು ಬಸ್‌ಗೆ ಕಾಯಬೇಕು.  ಸರಿಯಾದ ಸಮಯಕ್ಕೆ ಬಸ್ ಬರೋದಿಲ್ಲ. ಧೂಳು, ಹೊಗೆಯಲ್ಲೆ ನಿಲ್ಲಬೇಕು. ಶೆಲ್ಟರ್ ನಿರ್ಮಿಸಿದರೆ ಜನರಿಗೆ ಎಷ್ಟು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಮಳೆ, ಬಿಸಿಲಿನಲ್ಲಿಯೇ ನಿಲ್ಲಬೇಕು' ಎಂಬುದು ಲಕ್ಕುಂಡಿಯ ಬಸವರಾಜ ಹದ್ದಣ್ಣವರ ಅವರ ಅಳಲು.

`ಬಸ್ ತಂಗುದಾಣಗಳು ನಗರಸಭೆ ಸುರ್ಪದಿಯಲ್ಲಿವೆ. ನಿರ್ವಹಣೆ ಜವಾಬ್ದಾರಿಯನ್ನು ಇಲಾಖೆಗೆ ವಹಿಸಿದರೆ ಸಮರ್ಪಕವಾಗಿ ನಿರ್ವಹಿಸಲಾಗುವುದು. ನಗರದ ಮುಳಗುಂದ ನಾಕಾ ಮತ್ತು ಹಳೇ ಬಸ್ ನಿಲ್ದಾಣ ಬಳಿ ತಂಗುದಾಣ ನಿರ್ಮಿಸುವಂತೆ ಬೇಡಿಕೆಯೂ ಬಂದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ' ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ.ಎಸ್.ಕರೀಗೌಡರ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.