ADVERTISEMENT

ಬಾಯ್ತೆರೆದ ನಿಷ್ಕ್ರಿಯ ಕೊಳವೆ ಬಾವಿಗಳು!

​ಪ್ರಜಾವಾಣಿ ವಾರ್ತೆ
Published 2 ಜುಲೈ 2014, 6:44 IST
Last Updated 2 ಜುಲೈ 2014, 6:44 IST
ಗಜೇಂದ್ರಗಡದ ಸರ್ಕಾರಿ ಆವರಣದಲ್ಲಿರುವ ಕೊಳವೆ ಬಾವಿ
ಗಜೇಂದ್ರಗಡದ ಸರ್ಕಾರಿ ಆವರಣದಲ್ಲಿರುವ ಕೊಳವೆ ಬಾವಿ   

ಗಜೇಂದ್ರಗಡ: ಬಾಯಿ ತೆರೆದುಕೊಂಡು ಸಾಕಷ್ಟು ಕೊಳವೆ ಬಾವಿಗಳು ರೋಣ ತಾಲ್ಲೂಕಿ­ನಲ್ಲಿವೆ. ಮುಗ್ಧ ಜೀವಗಳನ್ನು ಬಲಿ ತೆಗೆದು­ಕೊಳ್ಳಲು ಕಾಯುತ್ತಿವೆ!

ಹೌದು, ರೋಣ ತಾಲ್ಲೂಕಿನಾದ್ಯಂತ ತಾಂಡ­ವಾಡುತ್ತಿರುವ ನಿರಂತರ ಭೀಕರ ಬರದಿಂದಾಗಿ ಎಷ್ಟೇ ಆಳಕ್ಕೆ ಕೊರೆದರೂ ಅಂತರ್ಜಲ ದೊರಕು­ತ್ತಿಲ್ಲ. ರೈತರು ನೀರಿಸೆಗೆ ಭೂಮಿಯನ್ನು ಕೊರೆ­ಯು­ತ್ತಲೇ ಇದ್ದಾರೆ. ನೀರು ಬಾರದಿದ್ದಾಗ ನಿರಾಸೆ ಅನುಭವಿಸುತ್ತಗಾರೆ. ಆ ನಿರಾಸೆಯಲ್ಲಿ ತೋಡಿದ ಗುಂಡಿ ಮುಚ್ಚದೆ ಮರೆಯುತ್ತಾರೆ.

ಜೂನ್‌ 15ರಂದು ಬಿಜಾಪೂರ ಜಿಲ್ಲೆಯ ನಾಗ­ಠಾಣ  ತಾಲ್ಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಾಲ್ಕು ವರ್ಷದ ಅಕ್ಷತಾ ಪಾಟೀಲ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆಯ ನಂತರ ಸರ್ಕಾರ ಕಣ್ತೆರದಂತೆ ಕಾಣುತ್ತಿದೆ.

ಬಹುತೇಕ ಕೃಷಿ ಪ್ರಧಾನ ಕುಟುಂಬಗಳೇ ನೆಲೆಸಿರುವ ರೋಣ ತಾಲ್ಲೂಕಿನಲ್ಲಿ ಹೇಳಿ­ಕೊಳ್ಳಲು ನೀರಾವರಿ ಯೋಜನೆ ಇಲ್ಲ. ಅಸಮ­ರ್ಪಕ ಮಳೆ ಹಂಚಿಕೆಯ ಮಧ್ಯೆಯೂ ಕೃಷಿಯನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇರುವ ಇಲ್ಲಿ ಕೃಷಿಕರು 500 ರಿಂದ 600 ಅಡಿ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಳವೆ ಬಾವಿ ಆಶ್ರಿತ ಕೃಷಿಯನ್ನು ನಡೆಸುತ್ತಿದ್ದಾರೆ ಮರಿಯಪ್ಪ ಬಾರಿಗಿಡದ.

ಇವರೊಬ್ಬರು ಮಾತ್ರವಲ್ಲ ಮರಿಯಪ್ಪರಂತಹ ಹಲವು ಕೃಷಿಕ ಕುಟುಂಬಗಳಿವೆ. ಹಿಂದೆ ಜೀವಜಲ ಹೊಂದಿದ್ದ ಈ ಕೊಳವೆ ಬಾವಿಗಳು ಅಸ್ತಿತ್ವ ಕಳೆದುಕೊಂಡು ಬರಡಾಗಿವೆ. ಹೆಸ್ಕಾಂ ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ 5,789 ಕೊಳವೆ ಬಾವಿಗಳಿವೆ. ಇದರಲ್ಲಿ ಶೇ.35 ರಷ್ಟು ಕೊಳವೆ ಬಾವಿಗಳು ಅಸ್ತಿತ್ವ ಕಳೆದುಕೊಂಡಿವೆ. ‘ಅಸ್ತಿತ್ವ ಕಳೆದುಕೊಂಡ ಕೊಳವೆ ಬಾವಿಗಳನ್ನು ಕೃಷಿಕರು ಮುಚ್ಚುವ ಗೋಜಿಗೆ ಹೋಗಿಲ್ಲ. ಪ್ರಮುಖ ರಸ್ತೆ ಅಕ್ಕ–ಪಕ್ಕದಲ್ಲಿನ ತೆರೆದ ಬಾವಿಗಳು ಮಾತ್ರ ಕಣ್ಣಿಗೆ ಕಾಣಿಸುತ್ತವೆ. ಆದರೆ, ಜಮೀನುಗಳಲ್ಲಿನ ತೆರೆದ ಕೊಳವೆ ಬಾವಿಗಳು ಅಗಣಿತ ಸಂಖ್ಯೆಯಲ್ಲಿದ್ದರೂ ಕಣ್ಣಿಗೆ ಕಾಣಿಸುವುದಿಲ್ಲ’ ಎನ್ನುತ್ತಾರೆ ಸಂಗಮೇಶ ಮಡಿವಾಳರ.

ರೋಣ ತಾಲ್ಲೂಕಿನ 30 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 305 ಕೈಪಂಪ್‌ಗಳು ಚಾಲ್ತಿಯಿವೆ. 359 ಕೊಳವೆ ಬಾವಿಗಳು ವಿಫಲವಾಗಿದೆ. 580 ಕೊಳವೆ ಬಾವಿಗಳು ನಿಷ್ಕ್ರಿಯಗೊಂಡಿವೆ.

‘ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಶೀಘ್ರ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕರೆದು ಕೃಷಿ ಜಮೀನಿ­ನಲ್ಲಿನ ತೆರದ ಕೊಳವೆ ಬಾವಿಗಳ ಸಮೀಕ್ಷೆ ನಡೆಸಿ ಮಾಲಿಕರಿಗೆ ಮುಚ್ಚುವಂತೆ ನೋಟಿಸ್‌ ನೀಡುವಂತೆ ಸೂಚಿಸಲಾಗುವುದು. ನೋಟಿಸ್‌ ನೀಡಿದಾಗ್ಯೂ ಮುಚ್ಚದಿದ್ದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದು ವಿಶೇಷ ತಹಶೀಲ್ದಾರ್‌ ಪಿ.ಬಿ. ಮೇಲಿನಮನಿ ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.