ADVERTISEMENT

ಬಾಲವಿಕಾಸ ಅಕಾಡೆಮಿಗೆ ನಾಲ್ಕು ಕೋಟಿ ರೂ.ಅನುದಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 9:20 IST
Last Updated 15 ಜನವರಿ 2012, 9:20 IST

ಮುಂಡರಗಿ: `ಪ್ರಸ್ತುತ ವರ್ಷ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವುಕ್ಕಾಗಿ ರಾಜ್ಯ ಸರಕಾರ ಬಾಲವಿಕಾಸ ಅಕಾಡೆಮಿಗೆ ನಾಲ್ಕು ಕೋಟಿ ರೂಪಾಯಿ ಅನುದಾನ ನೀಡಿದ್ದು, ಪರೀಕ್ಷಾ ಸಿದ್ಧತೆ, ಮಕ್ಕಳ ಜಾತ್ರೆ, ಮಕ್ಕಳೊಂದಿಗೆ ಸಂವಾದ, ಪುಸ್ತಕ ಬಿಡುಗಡೆ ಮೊದಲಾದವುಗಳಿಗೆ ಅದನ್ನು ಹಂತಹಂತವಾಗಿ ಬಳಸಿಕೊಳ್ಳ ಲಾಗುವುದು~ ಎಂದು ರಾಜ್ಯ ಬಾಲವಿಕಾ ಅಕಾಡೆಮೆಯ ಅಧ್ಯಕ್ಷ ಮಹೇಶ ಟೆಂಗಿನಕಾಯಿ ತಿಳಿಸಿದರು.

 ಶನಿವಾರ ಸ್ಥಳೀಯ ಎಂ.ಎಸ್.ಡಂಬಳ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `ರಾಜ್ಯದ ಆಯ್ದ 195ತಾಲ್ಲೂಕುಗಳಲ್ಲಿ ತಲಾ 10ಸಾವಿರ ರೂಪಾಯಿ ವೆಚ್ಚದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವಸಿದ್ಧತಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು~ ಎಂದು ತಿಳಿಸಿದರು.   

 `ರಾಜ್ಯ ಬಾಲವಿಕಾಸ ಅಕಾಡೆಮಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಧಾರವಾಡದಲ್ಲಿ ಒಂದು ಎಕರೆ ಪ್ರದೇಶವನ್ನು ಪಡೆದುಕೊಂಡಿದ್ದು, ಅಲ್ಲಿ ಭವ್ಯವಾದ ಕಟ್ಟಡ ನಿಮಾಣಕ್ಕೆ ರಾಜ್ಯ ಸರಕಾರ ಈಗಾಗಲೇ 5.33ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. ಕಟ್ಟಡದ ನೀಲನಕ್ಷೆಯನ್ನು ತಯಾರಿಸಿ ಸರಕಾರದ ಅನುಮತಿಗೆ ಕಳುಹಿಸಲಾಗಿದ್ದು, ಸಧ್ಯದಲ್ಲಿಯೇ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ~ ಎಂದು ಅವರು ಹೇಳಿದರು.

 `ರಾಜ್ಯದ ಗ್ರಾಮೀಣ ಕ್ರೆಡೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಅವುಗಳನ್ನು ದಾಖಲಿಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಬಾಲವಿಕಾಸ  ಅಕಾಡೆಮೆ ಸದಸ್ಯ ನಿಂಗು ಸೊಲಗಿ ಅವರ ನೇತೃತ್ವದಲ್ಲಿ 60ಜನ ಸಂಪನ್ಮೂಲ ವ್ಯಕ್ತಿಗಳ ನೆರವಿನೊಂದಿಗೆ ಭ್ರಹತ್ ಪುಸ್ತಕವನ್ನು ಹೊರತರಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತಂತೆ 18ಜಿಲ್ಲೆಗಳ ದಾಖಲಿಕರಣ ಪೂರ್ಣಗೊಂಡಿದ್ದು, ಉಳಿದ ಜಿಲ್ಲೆಗಳ ಕ್ರೂಡೀಕರಣ ಸಧ್ಯದಲ್ಲಿಯೆ ಪೂರ್ಣಗೊಳ್ಳಲಿದೆ~ ಎಂದು ಅವರು ತಿಳಿಸಿದರು.

 `ರಾಜ್ಯದ ದಾವಣಗೇರೆ, ತುಮಕೂರು ಜಿಲ್ಲೆಯ ಗುಬ್ಬಿ, ಬಿಜಾಪುರದ ಬಸವನಬಾಗೇವಾಡಿ ಹಾಗೂ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಮಕ್ಕಳ ಮಿತ್ರಪಡೆಗಳನ್ನು ರಚಿಸಲಾಗಿದ್ದು, ಅದನ್ನು ಹಂತಹಂತವಾಗಿ ರಾಜ್ಯದ ವಿವಿಧ ತಾಲ್ಲೂಕುಗಳಿಗೆ ವಿಸ್ತರಿಸಲಾಗುವುದು. ಮಕ್ಕಳ ಕುರಿತ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು ರಾಜ್ಯದ 8ಜನರಿಗೆ ತಲಾ 50ಸಾವಿರ ರೂಪಾಯಿ ಸಹಾಯ ಧನ (ಪೆಲೋಷಿಫ್) ನೀಡಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಅವರು ತಿಳಿಸಿದರು.

 `ಬಾಲ ವಿಕಾಸ ಅಕಾಡೆಮೆಯು 18ವರ್ಷದೊಳಗಿನ ಮಕ್ಕಳಿಗೆ ರೂಪಿಸಿರುವ ವಿವಿಧ ಕಾರ್ಯಕ್ರಮಗಳು, ಯೋಜನೆಗಳು ಸಂಪೂರ್ಣ ಮುಕ್ತವಾಗಿದ್ದು, 18ವರ್ಷದೊಳಗಿನ ಯಾರೂ ಬೇಕಾದರೂ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬಹುದು~ ಎಂದು ಬಾಲ ವಿಕಾಸ ಅಕಾಡೆಮೆಯ ಸದಸ್ಯ ನಿಂಗು ಸೊಲಗಿ ತಿಳಿಸಿದರು. 

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಚ್.ಜೆ.ಚಂದ್ರಶೇಖರಯ್ಯ, ಪ್ರಾಚಾರ್ಯ ಪಿ.ಕೆ.ಪಾಟೀಲ, ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಎಸ್.ಎಸ್.ವಾರದ, ನಿಂಗು ಸೊಲಗಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.