ADVERTISEMENT

ಬಾಳೆಯನ್ನೇ ಸುಟ್ಟಬೆಂಕಿ ರೋಗ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 9:55 IST
Last Updated 14 ಜನವರಿ 2012, 9:55 IST

ಗಜೇಂದ್ರಗಡ: ಕಷ್ಟ ಪಟ್ಟು ಬೆಳೆದ ಬಾಳೆ ಫಸಲು ಪಡೆದು ಸಂಭ್ರಮಿಸಬೇಕಿದ್ದ ತಾಲ್ಲೂಕಿನ ಬಾಳೆ ಬೆಳೆಗಾರರನ್ನು ಬೆಳೆಗೆ ಅಂಟಿಕೊಂಡ ~ಬೆಂಕಿ ರೋಗ~ ಸಂಕಷ್ಟಕ್ಕೆ ದೂಡಿದೆ.

ದಾಳಿಂಬೆ, ವೀಳ್ಯೆದೆಲೆ, ತೆಂಗು, ಮಾವು ಇತ್ಯಾದಿ ತೋಟಗಾರಿಕೆ ಬೆಳೆಗಳಿಂದ ಕೈ ಸುಟ್ಟುಕೊಂಡಿದ್ದ ರೋಣ ತಾಲ್ಲೂಕಿನ ಗಜೇಂದ್ರಗಡ, ರಾಜೂರ, ಗೋಗೇರಿ, ಕಾಲಕಾಲೇಶ್ವರ, ಲಕ್ಕಲಕಟ್ಟಿ, ನಾಗೇಂದ್ರಗಡ, ಕಲ್ಲಿಗನೂರ, ನೆಲ್ಲೂರ, ಪ್ಯಾಟಿ, ಸೂಡಿ, ಕುಂಟೋಜಿ, ನಾಗರಸಕೊಪ್ಪ, ರಾಮಾಪೂರ ಮುಂತಾದ ಗ್ರಾಮಗಳ ಕೊಳವೆ ಬಾವಿ ನೀರಾವರಿ ಕೃಷಿ ಆಶ್ರಿತ 500 ಕ್ಕೂ ಹೆಚ್ಚು ರೈತರು 2007 ರ ಈಚೆಗೆ ಪ್ರಥಮ ಬಾರಿಗೆ ಬಾಳೆದು ನಿರೀಕ್ಷೆಗೂ ಮೀರಿ ಆದಾಯ ನೀಡಿ ಬೆಳೆಗಾರರ ವಿಶ್ವಾಸ ಹೆಚ್ಚಿಸಿತ್ತು.

ಪ್ರಸಕ್ತ ವರ್ಷವೂ ಉತ್ತಮ ಫಸಲು ಕೈಸೇರುತ್ತದೆ ಎಂಬ ನಂಬಿಕೆಯಲ್ಲಿದ್ದ ಬಾಳೆಗಾರರಿಗೆ `ಬೆಂಕಿ ರೋಗ~ ನಿರಾಸೆ ತೀವ್ರ ನಿರಾಸೆ ಮೂಡಿಸಿದೆ.

ದುಬಾರಿ ನಿರ್ವಹಣೆ: ರೋಣ ತಾಲ್ಲೂಕಿನಲ್ಲಿ 100 ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಬಾಳೆ ಬೆಳೆಯುವವರು 1.8ಮೀ *1.8 ಮೀ ಅಂತರದಲ್ಲಿ ಪ್ರತಿ ಎಕರೆಗೆ 1200 ಗುಣಿಗಳನ್ನು ತೋಡಬೇಕು. ಸಸಿ ನೆಟ್ಟ ದಿನದಿಂದ ಆರು ತಿಂಗಳ ವರೆಗೆ ಸಕಾಲಕ್ಕೆ ಕೊಟ್ಟಿಗೆ ಗೊಬ್ಬರ, ಕಳೆ (ಕಸ) ತೆರವುಗೊಳಿಸುವಿಕೆ, ನೀರುಣಿಸುವುದು ಹೀಗೆ ಪ್ರತಿಯೊಂದನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಅಂದಾಗ ಮಾತ್ರ ಸಸಿ ನೆಟ್ಟ ಏಳನೇ ತಿಂಗಳಿಗೆ ಬೆಳೆ ಫಸಲು ನೀಡುತ್ತದೆ. ಇವೆಲ್ಲವುಗಳ ಮಧ್ಯೆ ಎಕರೆ ಬಾಳೆ ಬೆಳೆಯಲು 70 ರಿಂದ 80 ಸಾವಿರ ಖರ್ಚಾಗುತ್ತದೆ.

ಬಂಗಾರದ ಬೆಳೆ: ಬೆಳೆಗೆ ಅನುಸರಿಸಬೇಕಾದ ಎಲ್ಲ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಿದರೆ ತಿಂಗಳಿಗೆ ಎರಡು ಬಾರಿ ಕಟಾವ್ ಮಾಡಬಹುದಾಗಿದೆ. ಬೆಳೆ ಉತ್ತಮವಾಗಿದ್ದರೆ ಎಕರೆಯೊಂದಕ್ಕೆ ಪ್ರತಿ ಬಾರಿ 5 ರಿಂದ 6 ಕ್ವಿಂಟಲ್ ಬಾಳೆ ಪಡೆಯಬಹುದು. ಬೆಳೆಗೆ ಯಾವುದೇ ಕೀಟ ಬಾಧೆ ಅಂಟಿ–ಕೊಳ್ಳದಿದ್ದರೆ ವರ್ಷವಿಡೀ ಫಲ ನೀಡುವ ಬಾಳೆ ಬೆಳೆಗಾರರ ಪಾಲಿಗೆ ಬಂಗಾರದ ಬೆಳೆಯೇ ಸರಿ.

ತಾಲ್ಲೂಕಿನಾದ್ಯಂತ ಬಹುತೇಕ ಕ್ಯಾವೆಂಡಿಷ್ (ಪಚ್ಚ ಬಾಳೆ)ಯನ್ನೇ ವ್ಯಾಪಕವಾಗಿ ಬೆಳೆಯಲಾಗಿದೆ. ಈ ತಳಿ ಹೆಚ್ಚು ಗಾಳಿ ಮತ್ತು ಉಷ್ಣ ವಾತಾವರಣವನ್ನು ಸಹಿಸಬಲ್ಲದ್ದಾಗಿದೆ. ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು ತುದಿಯಲ್ಲಿ ಬಾಗಿರುತ್ತದೆ. ತಿರುಳು ಮೃದುವಾಗಿದ್ದು, ಸಿಹಿಯಾಗಿರುತ್ತದೆ. ಚನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳಿರುತ್ತವೆ. ಈ ತಳಿ ಪನಾಮ ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

`ಇದು ರಫ್ತು ಮಾಡಲು ಅನುಕೂಲಕರ ತಳಿ. ಸ್ಥ್ದಳೀಯ ಮಾರುಕಟ್ಟೆಯಲ್ಲಿಯೇ 110 ರೂ.ಗಳಿಗೆ ಒಂದು ಗೊನೆ ಹೋಗುತ್ತದೆ. ಕಳೆದ ವರ್ಷ 580 ಗೊನೆಗಳಿಂದ 63,800 ರೂ ಮೊತ್ತ ಆದಾಯ ಬಂದಿತ್ತು. ಈ ವರ್ಷ ಒಂದು ಲಕ್ಷ ರೂಪಾಯಿಗೂ ಅಧಿಕ ಫಸಲು ನಿರೀಕ್ಷೆಯಲ್ಲಿದ್ದೇವು ಆದರೆ, ಬೆಂಕಿ ರೋಗದಿಂದ ಪ್ರಸಕ್ತ ವರ್ಷ ಬೆಳೆಗೆ ಮಾಡಿದ ಖರ್ಚು ಸಹ ಕೈಗೆಟುಕಲಿಲ್ಲ~ ಎಂದು ಎನ್ನುತ್ತಾರೆ ರೈತ ಸಂಗಪ್ಪ ಮಾರಿಹಾಳ.

ರೋಗದ ಲಕ್ಷಣಗಳು:  ಪ್ರಸ್ತುತ ~ಬೆಂಕಿ ರೋಗ~ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಬಾಳೆ ಎಲೆಯಲ್ಲಿ ಮೊದಲು ಚುಕ್ಕೆ ಕಾಣಿಸುತ್ತದೆ. ನಂತರ ಕಂದು ಬಣ್ಣಕ್ಕೆ ತಿರುಗುತ್ತದೆ. ನಿಧಾನವಾಗಿ ಎಲೆ ಸುಟ್ಟಂತಾಗುತ್ತದೆ. ನಂತರ ಹಳದಿ ಬಣ್ಣಕ್ಕೆ ತಿರುಗಿ, ಬಾಗಿ ಸುಳಿ ಮತ್ತು ಗಿಡ ಸಂಪೂರ್ಣ ನಾಶವಾಗುತ್ತದೆ. ಯಾವುದಾದರೂ ಒಂದು ಗಿಡಕ್ಕೆ ಬಂದರೂ ಸಾಕು. ಗಾಳಿ ಮತ್ತು ನೀರಿನ ಮೂಲಕ ಇಡೀ ತೋಟಕ್ಕೆ ಹರಡುತ್ತದೆ. ಹೀಗಾಗಿ ಬೇರೆ ರೈತರು ರೋಗ ಪೀಡಿತ ಬಾಳೆ ತೋಟದಲ್ಲಿ ಹೆಜ್ಜೆ ಇಡಲಿಕ್ಕೂ ಹಿಂದು ಮುಂದು ನೋಡುತ್ತಿದ್ದಾರೆ. ಅಲ್ಲಿಂದ ತಮ್ಮ ಹೊಲಗಳಿಗೆ ಅಂಟಿದರೆ ಏನು ಎಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ.

ರೋಗ ನಿಯಂತ್ರಣ ಕ್ರಮಗಳು: ಪ್ರಸ್ತುತ ತಾಲ್ಲೂಕಿನ ಬಾಳೆಗೆ ತಗುಲಿರುವ `ಬೆಂಕಿ ರೋಗ~ ಅಥವಾ ಎಲೆ ಚುಕ್ಕಿ ರೋಗ ನಿಂತ್ರಣಕ್ಕೆ ಕಾರ್ಬನ್ ಡೈಜಿಂ ಅಥವಾ ಬ್ರ್ಯಾಟಿನಿಯಂ ರಾಸಾಯನಿಕವನ್ನು 1 ಲೀಟರ ನೀರಿನಲ್ಲಿ 2 ರಿಂದ 3 ಗ್ರಾಂ ಬೆರೆಯಿಸಿ ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ರೋಗ ಕಾಣಿಸಿಕೊಂಡ ತಕ್ಷಣ ಹತೋಟಿ ಕ್ರಮಗಳನ್ನು ಅನುಸರಿಸುವುದು ಸೂಕ್ತ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಅಧಿಕಾರಗಳು.

ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಹತ್ತಾರು ರೈತಪರ ಯೋಜನೆಗಳನ್ನು ರೂಪಿಸಿದೆ. ಆದರೆ. ಇಲಾಖೆಯ ಯೋಜನೆಗಳ ಪರಿವೇ ಇಲ್ಲದೆ ನೂರಾರು ಹೆಕ್ಟರ್ ಪ್ರದೇಶದಲ್ಲಿನ ಬಾಳೆಗೆ ಅಂಟಿರುವ ಬೆಂಕಿ ರೋಗ ನಿವಾರಣೆಗೆ ಇಲಾಖೆಯ ಅಧಿಕಾರಿಗಳು ಶ್ರಮಿಸುವರೇ ಎಂಬುದನ್ನು ಬೆಳೆಗಾರರು ಎದುರು ನೋಡುತ್ತಿದ್ದಾರೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.