ADVERTISEMENT

ಬಾಳೆ ಬೆಳೆಯನ್ನು ಸುಡುತ್ತಿದೆ ‘ಬೆಂಕಿ’ ರೋಗ

ಚಂದ್ರಕಾಂತ ಬಾರಕೇರ
Published 30 ಏಪ್ರಿಲ್ 2014, 9:33 IST
Last Updated 30 ಏಪ್ರಿಲ್ 2014, 9:33 IST

ಗಜೇಂದ್ರಗಡ: ದಶಕದ ಹಿಂದೆ ಬೆಳೆಗಾರರ ಆರ್ಥಿಕ ಸದೃಢತೆಗೆ ಮುನ್ನುಡಿ ಬರೆದ ಬೆಳೆಯದು. ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರೀಕ್ಷೆಗೂ ಮೀರಿದ ಇಳುವರಿ–ಆದಾಯ ಎರಡನ್ನೂ ನೀಡಿದ ಹಿರಿಮೆ–ಗರಿಮೆ ಈ ಬೆಳೆಗಿದೆ. ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿ–ಗತಿಗಳನ್ನು ಬದಲಿಸಿ ಬದುಕನ್ನು ಉನ್ನತೀ ಕರಿಸಿದ ಕೀರ್ತಿಯನ್ನೂ ಹೊಂದಿದೆ.

ಆದರೆ, ಕಳೆದ ಕೆಲ ವರ್ಷಗಳಿಂದ ಬೆಳೆಗೆ ಅಂಟಿಕೊಂಡ ರೋಗದಿಂದಾಗಿ ಬೆಳೆಯ ಬಗೆಗಿನ ಗೌರವ ಕ್ಷೀಣಿಸಿದೆ. ಹೌದು, ಕಷ್ಟಪಟ್ಟು ಬೆಳೆದ ಬಾಳೆ ಫಸಲು ಪಡೆದು ಸಂಭ್ರಮಿಸಬೇಕಿದ್ದ ರೋಣ ತಾಲ್ಲೂಕಿನ ಬಾಳೆ ಬೆಳೆಗಾರ ರನ್ನು ಬೆಳಗೆ ಅಂಟಿಕೊಂಡಿರುವ ‘ಬೆಂಕಿ’ ರೋಗ ಬೆಳೆಯನ್ನು ಮಾತ್ರವಲ್ಲದೆ, ಸಮಸ್ತ ಬೆಳೆಗಾರರನ್ನೂ ಸಂಕಷ್ಟಕ್ಕೆ ದೂಡಿದೆ.

ದಾಳಿಂಬೆ, ವೀಳ್ಯದೆಲೆ, ತೆಂಗು, ಮಾವು, ದ್ರಾಕ್ಷಿ ಇತ್ಯಾದಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಂಡಿದ್ದ ರೋಣ ತಾಲ್ಲೂಕಿನ ಕೊಳವೆ ಬಾವಿ ನೀರಾವರಿ ಆಶ್ರಿತ  ರೈತರು 2002ರಿಂದ  ಈಚೆಗೆ ಬಾಳೆ ಬೆಳೆದು ನಿರೀಕ್ಷೆಗೂ ಮೀರಿ ಆದಾಯ ಪಡೆದುಕೊಂಡಿದ್ದರು.
ತಾಲ್ಲೂಕಿನಾದ್ಯಂತ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ  ತಲೆದೋ ರಿದ್ದ ಭೀಕರ ಬರದಿಂದ ಮಂಕಾಗಿದ್ದ ಬಾಳೆ, ಕಳೆದ ವರ್ಷ ಸುರಿದ ಸಮರ್ಪಕ ಮಳೆಯಿಂದಾಗಿ ಚೇತರಿಸಿಕೊಂಡಿತ್ತು. ಪರಿಣಾಮ ಪ್ರಸಕ್ತ ವರ್ಷ ಉತ್ತಮ ಫಸಲು ಕೈಸೇರುತ್ತದೆ ಎಂಬ ನಿರೀಕ್ಷೆ ಯಲ್ಲಿದ್ದ ಬಾಳೆ ಬೆಳೆಗಾರರಿಗೆ ‘ಬೆಂಕಿ’ ರೋಗ ಆಘಾತ ನೀಡಿದೆ.

ಬಂಗಾರದ ಬೆಳೆ: ಬೆಳೆಗೆ ಅನುಸರಿಸ ಬೇಕಾದ ಎಲ್ಲ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಿದರೆ ತಿಂಗಳಿಗೆ ಎರಡು ಬಾರಿ ಕಟಾವ್‌ ಮಾಡಬಹು ದಾಗಿದೆ. ಬೆಳೆ ಉತ್ತಮವಾಗಿದ್ದರೆ ಎಕರೆಯೊಂದಕ್ಕೆ ಪ್ರತಿ ಬಾರಿ ಕಟಾವಿಗೆ  5 ರಿಂದ 6 ಕ್ವಿಂಟಲ್‌ ಬಾಳೆ ಪಡೆಯ ಬಹುದಾಗಿದೆ. ಬೆಳೆಗೆ ಯಾವುದೇ ಕೀಟಬಾಧೆ ಅಂಟಿಕೊಳ್ಳದಿದ್ದರೆ ವರ್ಷ ವಿಡಿ ಫಲ ನೀಡುವ ಬಾಳೆ ಬೆಳೆಗಾರರ ಪಾಲಿಗೆ ಬಂಗಾರದ ಬೆಳೆಯೇ ಸರಿ!.

ತಾಲ್ಲೂಕಿನಾದ್ಯಂತ ಬಹುತೇಕವಾಗಿ ಪಚ್ಚ ಬಾಳೆಯನ್ನೇ ಬೆಳೆಯಲಾಗಿದೆ. ಈ ತಳಿ ಹೆಚ್ಚು ಗಾಳಿ ಮತ್ತು ಉಷ್ಣ ವಾತಾವರಣವನ್ನು ಸಹಿಸಬಲ್ಲದ್ದಾಗಿದೆ. ಚನ್ನಾಗಿ ಬೆಳೆದ ಗೊನೆಯಲ್ಲಿ ಸುಮಾರು 125 ಹಣ್ಣುಗಳಿರುತ್ತವೆ. ಈ ತಳಿ ಪನಾಮ ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

‘ಪಚ್ಚ ಬಾಳೆ ರಫ್ತು ಮಾಡಲು ಅನುಕೂಲಕರ ತಳಿ, ಸ್ಥಳೀಯ ಮಾರುಕಟ್ಟೆಯಲ್ಲಿಯೇ ₨ 110 ಗೆ ಒಂದು ಗೊನೆ ಮಾರಾಟವಾಗುತ್ತದೆ. ಕಳೆದ ವರ್ಷ 580 ಗೊನೆಗಳಿಂದ ₨ 63,800 ಮೊತ್ತ ಆದಾದ ಬಂದಿತ್ತು. ಈ ವರ್ಷ ಒಂದು ಲಕ್ಷ ರೂಪಾಯಿಗೂ ಅಧಿಕ ಫಸಲು ನಿರೀಕ್ಷೆಯಲ್ಲಿದ್ದೇವು. ಆದರೆ, ಬೆಂಕಿ ರೋಗದಿಂದ ಬೆಳೆಗೆ ಮಾಡಿದ ಖರ್ಚು ಸಹ ಕೈಗೆಟುಕಲಿಲ್ಲ’ ಎಂದು ಹೇಳುತ್ತಾರೆ ಸಂಗಪ್ಪ ಮಾರಿಹಾಳ.

ರೋಗದ ಲಕ್ಷಣಗಳು: ಪ್ರಸ್ತುತ ‘ಬೆಂಕಿ’ ರೋಗ ಬೆಳೆಗೆ ಮಾರಕವಾಗಿ ಪರಿಣ ಮಿಸಿದೆ. ಬಾಳೆ ಎಲೆಯಲ್ಲಿ ಮೊದಲು ಚುಕ್ಕೆ ಕಾಣಿಸುತ್ತದೆ. ನಂತರ ಕಂದು ಬಣ್ಣಕ್ಕೆ ತಿರುಗುತ್ತದೆ. ನಿಧಾನ ವಾಗಿ ಎಲೆ ಸುಟ್ಟಂತಾಗುತ್ತದೆ. ನಂತರ ಹಳದಿ ಬಣ್ಣಕ್ಕೆ ತಿರುಗಿ, ಬಾಗಿ ಸುಳಿ ಮತ್ತು ಗಿಡ ಸಂಪೂರ್ಣ ನಾಶವಾಗು ತ್ತದೆ. ಯಾವುದಾದರೂ ಒಂದು ಗಿಡ್ಡಕ್ಕೆ ಬಂದರೂ ಸಾಕು. ಗಾಳಿ ಮತ್ತು ನೀರಿನ ಮೂಲಕ ಇಡೀ ತೋಟಕ್ಕೆ ಹರಡುತ್ತದೆ. ಹೀಗಾಗಿ ಬೇರೆ ರೈತರು ರೋಗ ಪೀಡಿತ ಬಾಳೆ ತೋಟದಲ್ಲಿ ಹೆಜ್ಜೆ ಇಡಲಿಕ್ಕೂ ಹಿಂದು–ಮುಂದು ನೋಡುತ್ತಿದ್ದಾರೆ. ಅಲ್ಲಿಂದ ತನ್ನ ತೋಟಗಳಿಗೆ ಅಂಟಿದರೆ ಏನು? ಎಂಬ ಅತಂಕದಲ್ಲಿ ಬೆಳೆಗಾರರಿದ್ದಾರೆ.

ರೋಗ ನಿಯಂತ್ರಣ ಕ್ರಮಗಳು: ಬಾಳೆ ಬೆಳೆಗೆ ಅಂಟಿಕೊಂಡಿರುವ ‘ಬೆಂಕಿ’ ರೋಗ ಅಥವಾ ಎಲೆ ಚುಕ್ಕಿ ರೋಗ ನಿಯಂತ್ರ ಣಕ್ಕೆ ಕಾರ್ಬನ್‌ ಡೈಜಿಂ ಅಥವಾ ಬ್ರ್ಯಾಟಿನಿಯಂ ರಾಸಾಯನಿಕವನ್ನು 1 ಲೀಟರ್‌ ನೀರಿನಲ್ಲಿ 2 ರಿಂದ 3 ಗ್ರಾಂ ಬೆರೆಸಿ ಸಿಂಪಡಿಸಿದರೆ ರೋಗ ನಿಯಂತ್ರ ಣಕ್ಕೆ ಬರುತ್ತದೆ. ರೋಗ ಕಾಣಿಸಿಕೊಂಡ ತಕ್ಷಣ ಹತೋಟಿ ಕ್ರಮಗಳನ್ನು ಅನುಸರಿ ಸುವುದು ಸೂಕ್ತ ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ. ತಾಂಬೋಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.