ADVERTISEMENT

ಬೀಜೋತ್ಪಾದನೆ ಊರು ಬಾಳೇಹೊಸೂರು...!

ನಾಗರಾಜ ಹಣಗಿ
Published 14 ಅಕ್ಟೋಬರ್ 2012, 5:10 IST
Last Updated 14 ಅಕ್ಟೋಬರ್ 2012, 5:10 IST

ಶಿರಹಟ್ಟಿ ತಾಲ್ಲೂಕಿನ ಕೊನೆಯ ಗ್ರಾಮ ಬಾಳೇಹೊಸೂರು ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಇಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆ. ಆದರೆ ಇಂಥ ಹಿಂದುಳಿದ ಗ್ರಾಮ ಈಗ ಸೀಡ್ಸ್ ಬೆಳೆಯಲು ಇಡೀ ಗದಗ ಜಿಲ್ಲೆಯಲ್ಲಿಯೇ ಹೆಸರು ವಾಸಿಯಾಗಿದ್ದು  ಎಲ್ಲರೂ ಬಾಳೇಹೊಸೂರಿನತ್ತ  ನೋಡು ವಂತಾಗಿದೆ.

ಹೌದು. ಗ್ರಾಮದ ಅಂದಾಜು 500 ಎಕರೆಯಲ್ಲಿ ರೈತರು ಬೆಂಡೆಕಾಯಿ, ಕುಂಬಳಕಾಯಿ, ಸವತೆಕಾಯಿ, ಹಾಗಲಕಾಯಿ, ಬದನೆಕಾಯಿ, ಚವಳೀಕಾಯಿ ಸೀಡ್ಸ್ ಬೆಳೆದು ಸಂಬಂಧಿಸಿದ ಕಂಪನಿಗಳಿಗೆ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಬಾಳೇಹೊಸೂರಿನ ಹವಾಗುಣ ಹಾಗೂ ಮಣ್ಣು ಬೀಜೋತ್ಪಾದನೆಗೆ ಅತ್ಯುತ್ತಮವಾಗಿದೆ. ಹೀಗಾಗಿ ಇಲ್ಲಿನ ಎಲ್ಲ ರೈತರು ಬೀಜೋತ್ಪಾದನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ.

ಹೆಚ್ಚಾಗಿ ರಾಣೇಬೆನ್ನೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಹಿಕೋ, ಸ್ಯಾಂಡೋಜ್ ಸೇರಿದಂತೆ ಮತ್ತಿತರ ಪ್ರಸಿದ್ಧ ಬೀಜ ಮಾರಾಟದ ಕಂಪೆನಿಗಳವರು ರೈತರಿಗೆ ತಾವು ಸಿದ್ಧಪಡಿಸಿದ ಸೀಡ್ಸ್ ನೀಡಿ ಕ್ವಿಂಟಲ್‌ಗೆ ದರ ನಿಗದಿ ಪಡಿಸಿ ಅವುಗಳಿಂದ ಬೀಜ ಬೆಳೆದುಕೊಡಲು ಒಪ್ಪಂದ ಮಾಡಿಕೊಳ್ಳುತ್ತಾರೆ. ಒಪ್ಪಂದದಂತೆ ರೈತರು ಬೀಜ ಬೆಳೆದು ಪುನಃ ಅದೇ ಕಂಪೆನಿಗೆ ಮಾರಾಟ ಮಾಡುತ್ತಾರೆ.

ಎಕರೆ ಹೊಲದಾನ ಬೀಜಕ್ಕ ನಮ್ಗ 30 ಸಾವಿರ ಸಿಗತೈತಿ. ಒಮ್ಮೆ ಬೀಜ ಬೆಳದ ಕೊಡಾಕ ಕನಿಷ್ಠ ಮೂರು ತಿಂಗಳ ಸಾಕು. ವರ್ಷದಾಗ ನಾವು ಮೂರ ಸಲ ಬೀಜ ಬೆಳೀತೀವಿ ಎಂದು ರೈತ ಸುರೇಶ ಅಣ್ಣಿಗೇರಿ ಹೇಳುತ್ತಾರೆ. 

 ಇಲ್ಲಿಯೂ ಸಮಸ್ಯೆಗಳು ರೈತರ ಬೆನ್ನು ಬಿಟ್ಟಿಲ್ಲ. ಬೆಳೆ ಚೆನ್ನಾಗಿ ಬೆಳೆದರೆ ಉತ್ತಮ ಇಳುವರಿ ಬಂದು ಹೆಚ್ಚಿನ ಲಾಭ ಬರುತ್ತದೆ. ಆದರೆ ರೋಗ ರುಜಿನ ತಗುಲಿದರೆ ಲಾಭ ಕನಸಿನ ಮಾತು. 

 ಆಗ ರೈತನ ಪ್ರಯತ್ನ ಹೊಳೆಯಲ್ಲಿ ಹೋಮ ಮಾಡಿದಂತೆ. ಆದರೂ ಎದೆ ಗುಂದದ ರೈತರು ಸೀಡ್ಸ್ ಬೆಳೆಯುವಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ಒಟ್ಟಿನಲ್ಲಿ ಭೀಕರ ಬರಗಾಲದಲ್ಲೂ ಬಾಳೇಹೊಸೂರಿನ ರೈತರು ಸೀಡ್ಸ್ ಬೆಳೆದು ಸ್ವಲ್ಪ ನೆಮ್ಮದಿಯಿಂದ ಬದುಕು ಸಾಗಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.