ADVERTISEMENT

ಬೆಟಗೇರಿಗೆ ಬಂತು ಗಾಂಧೀ ಪುತ್ಥಳಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 9:20 IST
Last Updated 19 ನವೆಂಬರ್ 2012, 9:20 IST

ಗದಗ: ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗಾಂಧೀಜಿ ಅಭಿಮಾನಿಗಳ ಹಲವು ದಶಕಗಳ ಕನಸು ಈಡೇರುವ ಸಮಯ ಬಂದಿದೆ. ಸ್ವಾತಂತ್ರ್ಯ  ಹೋರಾಟ ಸಂದರ್ಭದಲ್ಲಿ ಗಾಂಧೀಜಿ ಬೆಟಗೇರಿಗೆ ಭೇಟಿ ನೀಡಿ ಹೋದ ಸ್ಥಳದಲ್ಲಿ ಈಗ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತಿದೆ.

ಬೆಟಗೇರಿಯ ಹೊಸಪೇಟೆ ಚೌಕ್‌ನಲ್ಲಿರುವ ಗಾಂಧೀಜಿ ಗುಡಿಯಲ್ಲಿ ರಾಷ್ಟ್ರಪಿತನ ಕಪ್ಪುಶಿಲಾ ಪುತ್ಥಳಿ ಅನಾವರಣಗೊಳ್ಳಲು ಮೂಹರ್ತ ನಿಗದಿ ಮಾತ್ರ ಬಾಕಿ ಇದೆ.. ಪುತ್ಥಳಿ ಪ್ರತಿಷ್ಠಾಪನೆ ಬಳಿಕ ಪ್ರತಿದಿನ ಪೂಜೆಯೂ ನಡೆಯಲಿದೆ. ಮೊದಲು ಈ ಸ್ಥಳದಲ್ಲಿ ಕಲ್ಲಿನಲ್ಲಿ ನಿರ್ಮಿಸಿದ ಕಟ್ಟೆ ಇತ್ತು. ಆ ಸ್ಥಳದಲ್ಲಿ ಸಣ್ಣ ಮಂದಿರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

1921ರಲ್ಲಿ ಗಾಂಧೀಜೀ ಗದಗ-ಬೆಟಗೇರಿ ಅವಳಿ ನಗರಕ್ಕೆ ಭೇಟಿ ನೀಡಿದ್ದರು. ಈಗಿನ ಮುನಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾಷಣ ಮಾಡಿದ್ದರು. ಸ್ವಾತಂತ್ರ್ಯ ಹೋರಾಟ ಗಾರ ದಿವಂಗತ ಅಂದಾನೆಪ್ಪ ದೊಡ್ಡಮೇಟಿ ಅವರ ಆಹ್ವಾನದ ಮೇರೆಗೆ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು.  ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಗದಗ ತಾಲ್ಲೂಕು ಮುಂಚೂಣಿಯಲ್ಲಿತ್ತು. 1916ರಲ್ಲಿ ಬಾಲಗಂಗಾಧರ ತಿಲಕ್ ಗದುಗಿಗೆ ಬಂದು ಪಂಚರ ಹೊಂಡದ ಬಯಲಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದ್ದರು.

ಗಾಂಧೀಜಿ ಭೇಟಿ ನೀಡಿದ ನೆನಪಿಗಾಗಿ ಬೆಟಗೇರಿಯ ಸ್ವಾತಂತ್ರ್ಯ ಹೋರಾಟಗಾರರು ಗಾಂಧೀಜಿ ಅವರ ಚಿತಾ ಭಸ್ಮಾವನ್ನು ತೆಗೆದುಕೊಂಡು ಬಂದಿದ್ದರು. ಅಲ್ಲಿ ಸಣ್ಣ ಗುಡಿಯನ್ನು ನಿರ್ಮಿಸಿ ಗಾಂಧೀ ಮೂರ್ತಿಯನ್ನು ಇಟ್ಟು ಪೂಜಿಸುತ್ತಿದ್ದರು. ಪ್ರತಿ ವರ್ಷ ಗಾಂಧಿ ಜಯಂತಿಯನ್ನು ರಾಜ್ಯೋತ್ಸವ ಆಚರಣೆ ಸಮಿತಿ ವತಿಯಿಂದ ಆಚರಿಸಿ ಕೊಂಡು ಬರಲಾಗುತ್ತಿದೆ. ರಾಷ್ಟ್ರಪಿತನ ಶಾಶ್ವತ ಸ್ಮರಣೆಗೆ ಪ್ರತಿಮೆ ಸ್ಥಾಪನೆ ಮಾಡುವಂತೆ ಇಪ್ಪತ್ತು ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಮಿತಿ ಹೋರಾಟ ಮಾಡುತ್ತಿತ್ತು.

ಬೆಟಗೇರಿಯ ಕರ್ನಾಟಕ ರಾಜ್ಯೋ ತ್ಸವ ಆಚರಣೆ ಸಮಿತಿಯ ವಿಶೇಷ ಆಸಕ್ತಿಯಿಂದಾಗಿಯೇ ಎರಡೂ ವರೆ ಅಡಿ ಎತ್ತರದ ಗಾಂಧೀಜಿ ಪುತ್ಥಳಿ ಯನ್ನು ಈಗ ಜಯಪುರದಿಂದ ತರಿಸ ಲಾಗಿದೆ.        ಇದಕ್ಕೆ ಶಾಸಕ ಶ್ರೀಶೈ ಲಪ್ಪ ಬಿದರೂರ ಮತ್ತು ನಗರಸಭೆ ಸಹ ನೆರವು ನೀಡಿದೆ.

`ಮುಸುಕು ಮುಚ್ಚಿದ ಪುತ್ಥಳಿಯನ್ನು ತಾತ್ಕಾಲಿಕವಾಗಿ ಇಡುವ ಸ್ಥಳಕ್ಕೆ ನಗರದ ಗಾಂಧೀ ವೃತ್ತದಿಂದ ವೆುರವಣಿಗೆಯಲ್ಲಿ ಕೊಂಡೊಯ್ಯಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ ಸಭೆ ಸೇರಿ ಪ್ರತಿಷ್ಠಾಪನೆ ದಿನ ನಿಗದಿ ಪಡಿಸ ಲಾಗುವುದು. ನಗರದ ಹುಯಿಲಗೋಳ ನಾರಾ ಯಣ ರಾವ್ ವೃತ್ತದ ಮಾದರಿ ಯಲ್ಲಿಯೇ ಗಾಂಧೀ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ~ ಎಂದು ಸಮಿತಿಯ ಮೂಲಗಳು ತಿಳಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.