ADVERTISEMENT

ಬೆಲೆ ಏರಿಕೆ ನಿಯಂತ್ರಣಕ್ಕೆ ಒತ್ತಾಯ: ಮನವಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:00 IST
Last Updated 22 ಜನವರಿ 2011, 9:00 IST

ಮುಂಡರಗಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ಕನ್ನಡ ಜನಾಭಿವೃದ್ಧಿ ವೇದಿಕೆಯ ಕಾರ್ಯಕರ್ತರು ಗುರುವಾರ ಪಟ್ಟಣದ ಪ್ರತಿಭಟನೆ ನಡೆಸಿದರು.

ಮುಂಜಾನೆ ಸ್ಥಳೀಯ ಕೊಪ್ಪಳ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿ ನಂತರ ತಹಸೀಲ್ದಾರ ಕಚೇರಿಗೆ ತೆರಳಿ ಈ ಕುರಿತು ಮನವಿ ಸಲ್ಲಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಬೆಲೆ ಏರಿಕೆಯಿಂದ ದೇಶದ ಜನತೆ ತತ್ತರಿಸುವಂತಾಗಿದೆ ಎಂದು ಅವರು ದೂರಿದರು.

ರಾಜ್ಯ ಸರಕಾರವು ಸೀರೆ ವಿತರಿಸುವಂತಹ ಅನಗತ್ಯ ಕಾರ್ಯಕ್ರಮಗಳನ್ನು ಬದಿಗೊತ್ತಿ ಸದಾ ಕಾಲ ಅತಿವೃಷ್ಟಿ ಅಥವಾ ಅನಾವೃಷ್ಟಿಗೆ ಈಡಾಗುತ್ತಿರುವ ಉತ್ತರ ಕರ್ನಾಟಕದ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಮನವಿ ಮಾಡಿಕೊಂಡರು.

‘ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ದೇಶವನ್ನು ಅವನತಿಯತ್ತ ಕೊಂಡೊಯ್ಯ ತೊಡಗಿವೆ. ಭ್ರಷ್ಟ ಆಡಳಿತದಿಂದ ರೋಸಿ ಹೋಗಿರುವ ಜನತೆ ಭೃಷ್ಟ ರಾಜಕಾರಣಿಗಳಿಗೆ ಸೂಕ್ತ ಸಮಯದಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ’ ಎಂದು ಅವರು ಎಚ್ಚರಿಸಿದರು.

ಕನ್ನಡ ಜನಾಭಿವೃದ್ಧಿ ವೇದಿಕೆಯ ಅಧ್ಯಕ್ಷ ದೇವಪ್ಪ ಇಟಗಿ, ಪುರಸಭೆ ಉಪಾಧ್ಯಕ್ಷ ಶಿವಗೌಡ್ರ ಗೌಡ್ರ, ಸದಸ್ಯ ಎಂ.ಜಿ.ವಡ್ಡಟ್ಟಿ, ಮುಖಂಡರಾದ ಅಡಿವೆಪ್ಪ ಕಟ್ಟಿಮನಿ, ಹಾಲಪ್ಪ ಗುಡ್ಲಾನೂರ, ಸಿದ್ದಪ್ಪ ಮುದ್ಲಾಪೂರ, ಸುರೇಶ ದೊಡ್ಡಮನಿ, ರಾಜು ದಂಡಿನ, ಸೈಯದ್ ಸಾಬ್, ಬಸಯ್ಯ ಇಟಗಿಮಠ, ಬಸವರಾಜ ನವಲಗುಂದ, ಮಂಜುನಾಥ ಎಮ್ಮಿ, ಹನುಮಂತ ಸುಣಗಾರ, ಕುರುವತ್ತೆಪ್ಪ ಅರಿಷಣದ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.