ನರೇಗಲ್: ನಮ್ಮ ಮಕ್ಕಳು ಕೇವಲ ಎಂಜಿನಿಯರ್ ಆಗಲಿ, ಡಾಕ್ಟರ್ ಆಗಲಿ ಎಂಬ ಮನೋಭಾವ ಪಾಲಕರಲ್ಲಿ ಬೇಡ. ಎಲ್ಲಕ್ಕಿಂತ ಮೊದಲು ಅವರು ಉತ್ತಮ ಸಂಸ್ಕಾರವಂತರಾಗಲಿ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸಿದ್ಧಗೂಳಸಬೇಕು ಎಂದು ಹಾಲಕೆರೆ ಅನ್ನದಾನೇಶ್ವರಮಠದ ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.
ಸ್ಥಳೀಯ ಅನ್ನದಾನೇಶ್ವರ ಸೆಂಟ್ರಲ್ ಶಾಲೆಯ ವಾರ್ಷಿಕೋತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಮಕ್ಕಳು ಎಂಜಿನಿಯರ್, ಡಾಕ್ಟರ್ ಆದ ತಕ್ಷಣವೇ ಅವರು ಪರದೇಶಕ್ಕೆ ಹೋಗಬೇಕು, ಸಾಕಷ್ಟು ದುಡ್ಡು ತರಬೇಕೆನ್ನುವ ಆಸೆಯನ್ನು ನಿಮ್ಮ ಮನದಲ್ಲಿ ಹೊಂದಬೇಡಿ. ಅಲ್ಲಿಗೆ ಹೋಗಿ ಅವರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಕಲಿತು ದೇಶಿಯ ಸಂಸ್ಕೃತಿಯನ್ನು ಮರೆಯುತ್ತಾರೆ ಹಿರಿಯರು, ತಂದೆ, ತಾಯಿ ಹಾಗೂ ಬಂಧು ಭಾಂದವರ ಸಂಬಂಧದಿಂದ ದೂರವಾಗುತ್ತರೆ ಆದ್ದರಿಂದ ನಮ್ಮ ಸನಾತನ ಸಂಸ್ಕೃತಿಯ ಪರಂಪರೆಯನ್ನು ಅವರಿಗೆ ಬಾಲ್ಯದಲ್ಲಿಯೆ ನೀಡಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿ ಎಂದು ಸ್ವಾಮೀಜ ಹೇಳಿದರು.
ಉಪನ್ಯಾಸಕ ಅನಿಲ ವೈದ್ಯ ಮಾತನಾಡಿ ಚಿಕ್ಕ ಮಕ್ಕಳ ಆ ತೊದಲು ನುಡಿಯಗಳನ್ನು ಕೇಳುವುದೆ ಒಂದು ಸೊಗಸು. ನಮ್ಮ ಭಾಷೆಯಾದ ಕನ್ನಡದ ಬಗ್ಗೆ ಅಭಿಮಾನವಿರಲಿ ಆದರೆ ಇಂಗ್ಲಿಷ್ ಅನ್ನು ಕಲಿಕಾ ಭಾಷೆಯನ್ನಾಗಿ ಅಭ್ಯಸಿಸಿ, ಇಂಗ್ಲಿಷ್ ಭಾಷೆಯನ್ನು ಕಿಟಕಿಯನ್ನಾಗಿ ಮಾಡಿಕೊಂಡು ಜಗತ್ತನ್ನು ತಿಳಿಯೋಣ ಎಂದು ಹೇಳಿದರು.
ಕೊಟ್ಟೂರು ದೇಶಿಕರು, ಸಂಸ್ಥೆಯ ಕಾರ್ಯದರ್ಶಿ ಸಿ.ಕೆ.ಹಿರೇಮಠ, ಆಡಳಿತಾಧಿಕಾರಿ ಎಸ್.ಜಿ.ಹಿರೇಮಠ, ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವೈ.ಸಿ.ಪಾಟೀಲ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅಂದಾನಗೌಡ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.